ಸಪ್ತಸಾಗರ ವಾರ್ತೆ ವಿಜಯಪುರ, ಸೆ.14: ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಸಮೀಪದ ಹಳೆಯ ತಹಶೀಲದಾರ ಕಚೇರಿ ರಸ್ತೆಯಲ್ಲಿರುವ ಎತ್ತರವಾದ ಐತಿಹಾಸಿಕ ಸ್ಮಾರಕ ಸಾಥಮಂಜಿಲ್ ಹಾಗೂ ಜಲಮಂಜಿಲ್ ಬಳಿ ಶನಿವಾರ ಸಂಜೆ ಮಹಾರಾಷ್ಟ್ರದ ಕೊಲ್ಹಾಪುರದ ಹವ್ಯಾಸಿ ಚಿತ್ರಕಲಾವಿದರು ಹಾಗೂ ವಾಸ್ತುಶಿಲ್ಪಿಗಳು ಗುಂಪು ಗುಂಪಾಗಿ ಕುಳಿತು ಸ್ಮಾರಕಗಳ ಚಿತ್ರಬಿಡಿಸುತ್ತಿದ್ದುದು ಸಾರ್ವಜನಿಕರ ಗಮನ ಸೆಳೆಯಿತು.
ಕೊಲ್ಹಾಪುರದ ಸುಮಾರು 30 ಜನ ಹವ್ಯಾಸಿ ಚಿತ್ರಕಲಾವಿದರು ಹಾಗೂ ವಾಸ್ತುಶಿಲ್ಪಿಗಳನ್ನೊಳಗೊಂಡ ತಂಡವು ಪ್ರಾಚೀನ ಸ್ಮಾರಕಗಳ ಚಿತ್ರ ಬಿಡಿಸುವ ಮೂರು ದಿನಗಳ ಶಿಬಿರವನ್ನು ನಗರದಲ್ಲಿ ಹಮ್ಮಿಕೊಂಡಿದೆ.
ಶುಕ್ರವಾರ ಇಬ್ರಾಹಿಂ ರೋಜಾ, ಗೋಳಗುಮ್ಮಟದಲ್ಲಿ ಶಿಬಿರ ನಡೆಸಿದ ಚಿತ್ರಕಲಾವಿದರು ಡ್ರಾಯಿಂಗ್ ಪೇಪರ್ ಹಾಗೂ ಬುಕ್ ಗಳಲ್ಲಿ ಬಣ್ಣದ ಪೆನ್ಸಿಲ್ ಹಾಗೂ ಕುಂಚದಿಂದ ಅಲ್ಲಿನ ಪ್ರಾಚೀನ ಕಟ್ಟಡಗಳ ಆಕರ್ಷಕ ಚಿತ್ರಗಳನ್ನು ಬಿಡಿಸಿದರು.
ಶನಿವಾರ ನಗರದ ಗಗನ್ ಮಹಲ್, ಸಾಥಮಂಜಿಲ್ ಹಾಗೂ ಜಲಮಂಜಿಲ್ ಸ್ಮಾರಕಗಳ ಚಿತ್ರಬಿಡಿಸಿದರು. ನಂತರ ತಾವು ಬಿಡಿಸಿದ ಕಲಾಕೃತಿಗಳೊಂದಿಗೆ ಸ್ಮಾರಕಗಳ ಮುಂದೆ ನಿಂತು ಗ್ರೂಪ್ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.
ಈ ಶಿಬಿರದಲ್ಲಿ ಸ್ಥಳೀಯ ಸಿಕ್ಯಾಬ್ ಸಂಸ್ಥೆಯ ಮಲಿಕ್ ಸಂದಲ್ ಇನಸ್ಟಿಟ್ಯೂಟ್ ಆಫ್ ಆಟ್೯ ಆ್ಯಂಡ್ ಆರ್ಟಿಟೆಕ್ಚರ್ ಕಾಲೇಜಿನ ವಿದ್ಯಾರ್ಥಿನಿಯರೂ ಪಾಲ್ಗೊಂಡಿದ್ದರು.
ರವಿವಾರ ಬಾರಾಕಮಾನ್ ಗಾರ್ಡನದಲ್ಲಿ ಈ ಚಿತ್ರಕಲಾ ಶಿಬಿರ ನಡೆಯಿತು.
ಪ್ರಾಚೀನ ವಾಸ್ತುಶಿಲ್ಪ ಕಲೆಯ ಬಗ್ಗೆ ತಿಳಿದುಕೊಳ್ಳುವ ಜೊತೆಗೆ ಕಲಾಕೃತಿಗಳ ಮೂಲಕ ಪ್ರಾಚೀನ ಅದ್ಭುತ ಸ್ಮಾರಕಗಳನ್ನು ಜನತೆಗೆ ಪರಿಚಯಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ.
ಪುಣೆಯ ಹವ್ಯಾಸಿ ಚಿತ್ರಕಲಾವಿದರು ಹಾಗೂ ವಾಸ್ತುಶಿಲ್ಪಿಗಳು ಪ್ರತೀ ವರ್ಷವೂ ಬೇರೇ ಬೇರೆ ನಗರಗಳಲ್ಲಿ ಇಂಥ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಈ ವರ್ಷ ಐತಿಹಾಸಿಕ ವಿಜಯಪುರ ನಗರದಲ್ಲಿ ಶಿಬಿರ ಹಮ್ಮಿಕೊಂಡಿದ್ದಾರೆ. ಈ ಶಿಬಿರದಲ್ಲಿ ಬಿಡಿಸಿದ ಕಲಾಕೃತಿಗಳನ್ನು ನಂತರದಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ ಎಂದು ಶಿಬಿರಾರ್ಥಿಗಳು ತಿಳಿಸಿದರು.
ಕುಂಚದಲ್ಲಿ ಪ್ರಾಚೀನ ಸ್ಮಾರಕಗಳ ಸೆರೆ
