ಶಿಫಾಗೆ ಮತ್ತೊಂದು ಜಾಗತಿಕ ಗೌರವ: ರಷ್ಯಾದ ಪರಮಾಣು ಶಕ್ತಿ ವಿಶ್ವ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 20:
ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದ ವಿಶ್ವ ಯುವ ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಗಮನ ಸೆಳೆದಿದ್ದ ವಿಜಯಪುರದ ಕುಮಾರಿ ಶಿಫಾ ಜಮಾದಾರ ಅವರು ಇದೀಗ ಮತ್ತೊಂದು ಮಹತ್ವದ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ (IAEA) ಹಾಗೂ ರಷ್ಯಾ ಸರ್ಕಾರದ ಸಹಯೋಗದಲ್ಲಿ ರಷ್ಯಾದ ಆಬ್ನಿನ್ಸ್ಕ್ ನಗರದಲ್ಲಿ ಜೂನ್ 25ರಿಂದ ಮೂರು ದಿನಗಳ ಕಾಲ ನಡೆಯಲಿರುವ ಪರಮಾಣು ಶಕ್ತಿಯ ಶಾಂತಿಯುತ ಬಳಕೆ, ಹಸಿವು ನಿವಾರಣೆ ಹಾಗೂ ಜಾಗತಿಕ ಅಭಿವೃದ್ಧಿಗೆ ಪರಮಾಣು ತಂತ್ರಜ್ಞಾನದ ಸದ್ಬಳಕೆ ಕುರಿತ ವಿಶ್ವ ಸಮ್ಮೇಳನದಲ್ಲಿ ಶಿಫಾ ಜಮಾದಾರ ಅವರು ಭಾರತೀಯ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ.
ಈ ಜಾಗತಿಕ ಸಮಾವೇಶದಲ್ಲಿ ಸುಮಾರು 120 ರಾಷ್ಟ್ರಗಳಿಂದ ತಲಾ ಒಬ್ಬ ಪ್ರತಿನಿಧಿ ಭಾಗವಹಿಸಲಿದ್ದು, ಭಾರತದ ಪರವಾಗಿ ಶಿಫಾ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.
ಶಿಫಾ ಜಮಾದಾರ ಅವರು ಈಗಾಗಲೇ ಹಲವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2024ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ವಿಶ್ವ ಯುವ ನಾಯಕರ ಸಮಾವೇಶ ಹಾಗೂ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಗ್ಲೋಬಲ್ ಯೂತ್ ಸಮಿಟ್‌ನಲ್ಲಿ ಭಾಗವಹಿಸಿದ್ದರು. 2025ರಲ್ಲಿ ಮಾಸ್ಕೋದಲ್ಲಿ ನಡೆದ ವಿಶ್ವ ಯುವ ಶೃಂಗಸಭೆಯಲ್ಲಿ ವಿಶ್ವಶಾಂತಿಯಲ್ಲಿ ಯುವಕರ ಪಾತ್ರ ಕುರಿತು ಅರ್ಥಪೂರ್ಣ ವಿಚಾರ ಮಂಡಿಸಿ ಮೆಚ್ಚುಗೆ ಪಡೆದಿದ್ದರು.
ಸಮಾಜಸೇವೆಯಲ್ಲಿಯೂ ಸಕ್ರಿಯರಾಗಿರುವ ಶಿಫಾ ಜಮಾದಾರ ಅವರು ಯುವತಿಯರ ಸಬಲೀಕರಣ, ಸ್ವಚ್ಛತೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸ ಮಾಡುತ್ತಿದ್ದಾರೆ. ಸ್ವಯಂಸೇವಾ ಸಂಸ್ಥೆಯ ಮೂಲಕ ಯುವತಿಯರಿಗಾಗಿ ಎಐ ತಂತ್ರಜ್ಞಾನ ಆಧಾರಿತ ಶೌಚಾಲಯಗಳ ನಿರ್ಮಾಣ, ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳು ಹಾಗೂ ಶೈಕ್ಷಣಿಕ ಕಿಟ್‌ಗಳ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಸಮರ್ಥವಾಗಿ ತಮ್ಮ ವಿಚಾರಗಳನ್ನು ಮಂಡಿಸುವ ಸಾಮರ್ಥ್ಯ ಹೊಂದಿರುವ ಶಿಫಾ ಅವರಿಗೆ ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ವಿಜಯಪುರ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಿಫಾ ಜಮಾದಾರ ಅವರು, “ಪರಮಾಣು ಶಕ್ತಿಯ ಶಾಂತಿಯುತ ಬಳಕೆ ಹಾಗೂ ಹಸಿವು ಮುಕ್ತ ಜಗತ್ತಿನ ನಿರ್ಮಾಣದಂತಹ ಮಹತ್ವದ ವಿಷಯಗಳ ಕುರಿತು ಚರ್ಚೆಯಾಗುವ ಈ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ಸಂತೋಷ ತಂದಿದೆ” ಎಂದು ಹೇಳಿದರು.

Share this