ಬಿಸಿ ಊಟಕ್ಕೆ ಎಣ್ಣೆ, ತೊಗರಿ ಬೇಳೆ ವಿತರಿಸಿ: ಸಿಇಒಗೆ ಮನವಿ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 28: ಅಕ್ಷರ ದಾಸೋಹ ಯೋಜನೆಯಡಿ
ಶಾಲೆಗಳಲ್ಲಿ ಮಧ್ಯಾಹ್ನ ಬಿಸಿ ಊಟಕ್ಕೆ ಮಕ್ಕಳಿಗೆ ಎಣ್ಣೆ, ತೊಗರಿ ಬೇಳೆ ವಿತರಿಸಬೇಕು. ಮೊಟ್ಟೆಗಳ ಖರೀದಿ
ಮೊತ್ತ ಹೆಚ್ಚಳವಾಗಿದ್ದು, ದರ ಮರುನಿಗದಿ
ಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ
ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಅರ್ಜುನ ಲಮಾಣಿ, ಶೈಕ್ಷಣಿಕ ವರ್ಷ ಆರಂಭವಾಗಿ ಜೂನ ತಿಂಗಳು ಮುಗಿಯುತ್ತಾ ಬಂದರೂ ಶಾಲೆಗಳಿಗೆ ಬೇಳೆ ಹಾಗೂ ಎಣ್ಣೆ
ಪೂರೈಕೆಯಾಗಿಲ್ಲ. ಮುಖ್ಯಗುರುಗಳು ಬೇಳೆ ಹಾಗೂ ಎಣ್ಣೆ ಸಹ ಅಂಗಡಿ ಮೂಲಕ ಖರೀದಿಸುತ್ತಾ
ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಜಿ ಎಣ್ಣೆಗೆ 180ರೂ. ಕೆಜಿ ಬೇಳೆಗೆ 120ರೂ. ದರ ನೀಡಿ ಮುಖ್ಯಗುರುಗಳು ಖರೀದಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಪ್ರಸ್ತುತ ಒಂದು ಮೊಟ್ಟೆಯ ಬೆಲೆ 8 ರೂ. ಇದೆ. ಸರ್ಕಾರ ಪ್ರತಿ ಮೊಟ್ಟೆಗೆ 6 ರೂ.ಗಳಂತೆ ಮಾತ್ರ ಅನುದಾನ ನೀಡುತ್ತಿದೆ. ಇದರಿಂದ ಪ್ರತಿ
ಮೊಟ್ಟೆಗೆ ಸುಮಾರು 2ರೂ. ಹೆಚ್ಚುವರಿ
ವೆಚ್ಚವಾಗುತ್ತಿದ್ದು, ಈ ಹೆಚ್ಚುವರಿ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಸ್ವಂತ ಜೇಬಿನಿಂದ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇಂತಹ ಪರಿಸ್ಥಿತಿಯಿಂದ ಮಧ್ಯಾಹ್ನ ಬಿಸಿ ಊಟ ಯೋಜನೆಯ ಸಮರ್ಪಕ ನಿರ್ವಹಣೆ ಕಷ್ಟವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಅನುದಾನವನ್ನು ತಕ್ಷಣ
ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು
ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಕ
ಸಂಘದ ಪ್ರಧಾನ ಕಾರ್ಯದರ್ಶಿ ಹಣಮಂತ ಕೊಣದಿ,
ನಗರ ವಲಯ ಶಿಕ್ಷಕರ ಸಂಘದ ಅಧ್ಯಕ್ಷ
ಜುಬೇರ ಕೆರೂರ ಇದ್ದರು.

Share this