ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 23:
ಮಾನವೀಯತೆ, ಶಾಂತಿ ಹಾಗೂ ಸದ್ಭಾವನೆಯ ಸಂದೇಶ ಸಾರಿದ ಹಜರತ್ ಗೌಸ್-ಏ-ಆಜಂ ಅವರ ಸ್ಮರಣೆ ಹಾಗೂ ಸರ್ವಧರ್ಮ ಸಮನ್ವಯತೆಯ ಕೇಂದ್ರವಾಗಿರುವ ಐತಿಹಾಸಿಕ ಹಜರತ್ ಅರ್ಕಾಟ್ ದರ್ಗಾದ ಉರುಸು ಅಂಗವಾಗಿ ಬುಧವಾರ ನಗರದಲ್ಲಿ ಭವ್ಯ ಭಕ್ತಿ-ಸದ್ಭಾವನಾ ಯಾತ್ರೆ ನಡೆಯಿತು.
ಸಾವಿರಾರು ಭಕ್ತರು ‘ನಾರಾಯೇ ತಕ್ಬೀರ್, ಅಲ್ಲಾಹು ಅಕ್ಬರ್’ ಘೋಷಣೆ ಮೊಳಗಿಸುತ್ತಾ, ಪವಿತ್ರ ಧ್ವಜಗಳನ್ನು ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡರು. ಪವಿತ್ರ ಪುಷ್ಪಗಳಿಂದ ಅಲಂಕರಿಸಲಾದ ಪಂಚ ಝೇಲಾಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.
ಜಾಮೀಯಾ ಮಸೀದಿ, ಶಹಾಪೇಟಿ, ಶಹಾಪುರ ದರ್ವಾಜಾ, ಮದೀನಾ ನಗರ, ಬಡಿಕಮಾನ್ ಸೇರಿದಂತೆ ನಗರದ ವಿವಿಧ ಭಾಗಗಳಿಂದ ಭಕ್ತರು ಯಾತ್ರೆಯಲ್ಲಿ ಭಾಗವಹಿಸಿದ್ದರು. ಅರ್ಕಾಟ್ ದರ್ಗಾದ ಸಜ್ಜಾದೆ ನಶೀನ್ ಸೈಯ್ಯದ್ ಇಕ್ಬಾಲ್ ಪೀರಾ ಹಾಗೂ ಧರ್ಮಗುರು ಡಾ. ಸೈಯ್ಯದ್ ತಖೀಪೀರಾ ಹುಸೈನಿ ಅವರ ನೇತೃತ್ವದಲ್ಲಿ ಯಾತ್ರೆ ಆಯೋಜಿಸಲಾಗಿತ್ತು.
ಸೊಲ್ಲಾಪುರ ನಾಕಾದಿಂದ ಆರಂಭಗೊಂಡ ಯಾತ್ರೆಯು ಗಾಂಧಿ ವೃತ್ತ, ಬಡಿಕಮಾನ್, ಜಾಮೀಯಾ ಮಸೀದಿ ರಸ್ತೆ ಸೇರಿದಂತೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಅರ್ಕಾಟ್ ದರ್ಗಾ ತಲುಪಿ ಸಂಪನ್ನಗೊಂಡಿತು. ಮಾರ್ಗದುದ್ದಕ್ಕೂ ಭಕ್ತರಿಗೆ ಕುಡಿಯುವ ನೀರು, ತಂಪು ಪಾನೀಯ, ಜ್ಯೂಸ್, ಹಣ್ಣು-ಹಂಪಲು ಹಾಗೂ ಐಸ್ಕ್ರೀಂ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸೈಯ್ಯದ್ ತಖೀಪೀರಾ ಹುಸೈನಿ, “ಹಜರತ್ ಗೌಸ್ ಪಾಕ್ ಅವರು ಶ್ರೇಷ್ಠ ವ್ಯಕ್ತಿತ್ವದ ಚೇತನರಾಗಿದ್ದು, ಮಾನವೀಯತೆ, ಶಾಂತಿ ಹಾಗೂ ಸದ್ಭಾವನೆಯ ಸಂದೇಶವನ್ನು ಸಾರಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬೆಳೆಸಬೇಕು” ಎಂದರು.
ವಿಜಯಪುರದ ಐತಿಹಾಸಿಕ ಅರ್ಕಾಟ್ ದರ್ಗಾ ದುವಾ-ದವಾಗೆ ಹೆಸರುವಾಸಿಯಾಗಿದ್ದು, ಭಕ್ತರ ನಂಬಿಕೆ ಹಾಗೂ ಭಕ್ತಿಭಾವದ ಪ್ರಮುಖ ಕೇಂದ್ರವಾಗಿದೆ ಎಂದು ಅವರು ಹೇಳಿದರು.
ಯಾತ್ರೆಯು ಗಾಂಧಿ ವೃತ್ತದ ಬಳಿ ಆಗಮಿಸಿದಾಗ ವಿಜಯಪುರ ನಗರ ಭಾಗವಾನ್ ಜಮಾತ್ ವತಿಯಿಂದ ವಿಶೇಷ ಸನ್ಮಾನ ನೆರವೇರಿಸಲಾಯಿತು. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸೂಫಿ ಸಂತರು ಹಾಗೂ ಮದರಸಾ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಡಾ. ಎಂ.ಎಸ್. ಮುಜಾವರ್, ಇರಾಫ್ ಸುನ್ನೇವಾಲೆ, ಮೆಹತೂಜ್ ಅಲಿ ಭಾಗವಾನ್, ಮೌಲಾನಾ ಹುಸೇನ್ ರಜ್ವಿ, ಮೌಲಾನಾ ನೌಶಾದ್ ಆಲಂ, ಆಶೀಫ್ ಭಾಗವಾನ್, ಫಾರೂಖ ವಾಲೀಕಾರ, ಸಲೀಂ ಮಕಾಂದಾರ, ಸರ್ಫರಾಜ್ ಮಿರ್ಧೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅರ್ಕಾಟ್ ದರ್ಗಾ ಉರುಸು: ವಿಜಯಪುರದಲ್ಲಿ ಭವ್ಯ ಸದ್ಭಾವನಾ ಯಾತ್ರೆ


