ಕರ್ನಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಸಪ್ತಸಾಗರ ವಾರ್ತೆ ವಿಜಯಪುರ, ನ. 1 :
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ‌ ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಗರದ ಕಂದಗಲ್ ಶ್ರೀ ಹನುಂತರಾಯ ರಂಗಮಂದಿರದಲ್ಲಿ ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.
ಭಾಗವಹಿಸಿದ ವಿದ್ಯಾರ್ಥಿಗಳು ಅರ್ಥಗರ್ಭಿತ ವಿಷಯಾಧಾರಿತ ಪ್ರದರ್ಶನ ನೀಡಿ, ವಿದ್ಯಾರ್ಥಿಗಳು ತಮ್ಮ ಮನೋಜ್ಞ ಅಭಿನಯದ‌ ಮೂಲಕ ನೋಡುಗರನ್ನು ರೋಮಾಂಚನಗೊಳಿಸಿದರು. ತಾಯಿಯ ನಿಸ್ವಾರ್ಥ ತ್ಯಾಗ‌, ತನ್ನೊಡಲ ಬಳ್ಳಿ ಚೆನ್ನಾಗಿರಲೆಂಬ ತಾಯಿ ಅನುಭವಿಸುವ ಕಷ್ಟ,, ಆ ಕಷ್ಟದಲ್ಲಿಯೇ ಮಕ್ಕಳ ಏಳಿಗೆ ಬಯಸುವ ಮಮತಾಮಯಿ‌ ತಾಯಿಯ ಕುರಿತ ಪ್ರದರ್ಶಿದ ಕಿರು‌ ಪ್ರಹಸನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಕನ್ನಡ ನಾಡಿನ ಜೀವನದಿ ಕಾವೇರಿ ಎಂಬ ಹಾಡಿಗೆ ಪುಟ್ಟ‌ ಪುಟ್ಟ ಮಕ್ಕಳು ಹೆಜ್ಜೆ ಹಾಕಿದರು ಭುವನೇಶ್ವರಿ ದೇವಿಯ ಆರಾಧಿಸುವ ಈ ನೃತ್ಯದಲ್ಲಿ ಮಕ್ಕಳು ಕರಾರುವಕ್ಕಾಗಿ ನೃತ್ಯ ಪ್ರದರ್ಶನ ನೀಡಿದ ಮಕ್ಕಳ ಪ್ರಸ್ತುತಿಗೆ ಪ್ರೇಕ್ಷಕರು ‌ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಹುರಿ ದುಂಬಿಸಿದರು.
ಮಕ್ಕಳಿಂದ ಬಾರಿಸು ಕನ್ನಡ ಡಿಂಡಿಮವ ಓ‌ ಕರ್ನಾಟಕ…..ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ‌ನುಡಿ..ಕಾಣಿಸದೇ ಹೊನ್ನ ಚರಿತೆಯಲಿ‌ ಹಂಪೆಯ‌ ಗುಡಿ..ಕನ್ನಡವೇ ನಮ್ಮಮ್ಮ ಅವಳಿಗೆ ಕೈ‌ಮುಗಿಯಮ್ಮ …. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು……..ಎಂಬ ಹಾಡಿಗೆ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅತ್ಯಂತ ಸೊಗಸಾಗಿ‌ ನೃತ್ಯ ಮಾಡಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರಮಾಣ‌ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಮಾಜ‌ ಕಲ್ಯಾಣ ಇಲಾಖೆಯ ಉಪ‌ ನಿರ್ದೇಶಕ ಮಹೇಶ ಪೋತದಾರ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ,ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜೆ. ಬಿರಾದಾರ, ವಾರ್ತಾಧಿಕಾರಿ ಅಮರೇಶ ದೊಡಮನಿ,
ಶಿಕ್ಷಣ ಸಂಯೋಜಕ ದಳವಾಯಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಹುಮಾಯೂನ್ ಮಮದಾಪೂರ ಅವರು ಸೊಗಸಾಗಿ ಕಾರ್ಯಕ್ರಮ‌ ನಿರೂಪಿಸಿ,ವಂದಿಸಿದರು.

Share this