ಸಪ್ತಸಾಗರ ವಾರ್ತೆ,ವಿಜಯಪುರ, ಜು.10:
ವಿಜಯಪುರ ಸೈಕ್ಲಿಂಗ್ ಗ್ರೂಪ್ (ವಿಸಿಜಿ) ವತಿಯಿಂದ ಆಷಾಢ ಮಾಸದ ಅಂಗವಾಗಿ ಪಂಡರಪುರಕ್ಕೆ ವಿಶೇಷ ಸೈಕಲ್ ಯಾತ್ರೆಯನ್ನು ಜುಲೈ 11ರಂದು (ಶನಿವಾರ) ಆಯೋಜಿಸಲಾಗಿದೆ ಎಂದು ವಿಸಿಜಿ ಸಂಘಟನಾ ಕಾರ್ಯದರ್ಶಿ ಸೋಮಶೇಖರ ಸ್ವಾಮಿ ತಿಳಿಸಿದ್ದಾರೆ.
ವಿಜಯಪುರದ ಬಿ.ಎಂ. ಪಾಟೀಲ ವೃತ್ತದಿಂದ ಶನಿವಾರ ಬೆಳಿಗ್ಗೆ 5.30ಕ್ಕೆ ಯಾತ್ರೆಗೆ ಚಾಲನೆ ದೊರೆಯಲಿದ್ದು, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಬಿ. ಪಾಟೀಲ ಚಾಲನೆ ನೀಡಲಿದ್ದಾರೆ. ವಿಸಿಜಿ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿರಲಿದ್ದಾರೆ.
ಈ ಯಾತ್ರೆಯಲ್ಲಿ ಡಾ. ರವಿ ಚೌಧರಿ, ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ವೀರೇಂದ್ರ ಗುಚ್ಚಟ್ಟಿ, ಡಾ. ರಾಜು ಯಲಗೊಂಡ, ಅನೀಲ ಧಾರವಾಡಕರ, ಸಿದ್ದು ನಾಯ್ಕೋಡಿ, ಶ್ರೀಕಾಂತ ಅಂಗಡಿ ಸೇರಿದಂತೆ ಒಟ್ಟು 40 ಸೈಕ್ಲಿಸ್ಟ್‌ಗಳು ಭಾಗವಹಿಸಲಿದ್ದಾರೆ. ಕೊಟ್ಟಲಗಿ ಗ್ರಾಮದಲ್ಲಿ ಡಾ. ರವಿ ಸಂಖ ನೇತೃತ್ವದ ಐವರು ಸೈಕ್ಲಿಸ್ಟ್‌ಗಳು ತಂಡವನ್ನು ಸೇರಿಕೊಳ್ಳಲಿದ್ದಾರೆ.
ಸುಮಾರು 100 ಕಿಲೋಮೀಟರ್‌ಗಳ ಈ ಸೈಕಲ್ ಯಾತ್ರೆಯು ಅರಕೇರಿ, ಬಬಲಾದ, ಬಾಲಗಾಂವ, ಉಮದಿ, ಹುಲಜಂತಿ ಹಾಗೂ ಮಂಗಳವೇಡಾ ಮಾರ್ಗವಾಗಿ ಸಂಜೆ ಪಂಡರಪುರ ತಲುಪಲಿದೆ.
ಜುಲೈ 12ರಂದು (ಭಾನುವಾರ) ಬೆಳಿಗ್ಗೆ 6 ಗಂಟೆಗೆ ನಡೆಯಲಿರುವ ಅಖಿಲ ಮಹಾರಾಷ್ಟ್ರ ಪಂಡರಪುರ ಸೈಕಲ್ ವಾರಿ ಸಮ್ಮೇಳನದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರೂಪ್ ತಂಡ ಭಾಗವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Editor
Rudrappa B Asangi
Editor
Managing Editor
Chetan Asangi
Managing Editor


