ವಿಜಯಪುರದಲ್ಲಿ ಅಸ್ಮಿತಾ ಖೇಲೋ ಇಂಡಿಯಾ ರಾಜ್ಯಮಟ್ಟದ ಸೈಕ್ಲಿಂಗ್ ಟೂರ್ನಿಗೆ ಚಾಲನೆ

ಸೈಕ್ಲಿಂಗ್ ಅಸೋಸಿಯೇಷನ್‌ಗೆ ಎರಡು ಸೈಕಲ್ ಕೊಡಿಸುವುದಾಗಿ ಸಂಸದ ರಮೇಶ ಜಿಗಜಿಣಗಿ ಭರವಸೆ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 17:
ಜಿಲ್ಲೆಯ ಸೈಕ್ಲಿಸ್ಟ್‌ಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್‌ಗೆ ಎರಡು ಸೈಕಲ್‌ಗಳನ್ನು ಕೊಡಿಸುವುದಾಗಿ ಸಂಸದ ರಮೇಶ ಜಿಗಜಿಣಗಿ ಭರವಸೆ ನೀಡಿದರು.
ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆ ಬಳಿಯ ವೆಲೋಡ್ರೋಮ್‌ನಲ್ಲಿ ಶನಿವಾರ ಆರಂಭವಾದ ಅಸ್ಮಿತಾ ಖೇಲೋ ಇಂಡಿಯಾ ರಾಜ್ಯಮಟ್ಟದ ಮಹಿಳಾ ಟ್ರ್ಯಾಕ್ ಸೈಕ್ಲಿಂಗ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸೈಕ್ಲಿಸ್ಟ್‌ಗಳ ಅಭ್ಯಾಸಕ್ಕೆ ಅನುಕೂಲವಾಗುವಂತೆ ವೆಲೋಡ್ರೋಮ್ ನಿರ್ಮಿಸಬೇಕೆಂಬ ಹಲವು ದಶಕಗಳ ಬೇಡಿಕೆ ಈಡೇರಿದೆ. ಇದೇ ವೆಲೋಡ್ರೋಮ್‌ನಲ್ಲಿ ಕ್ರೀಡಾಕೂಟ ನಡೆಯುತ್ತಿರುವುದನ್ನು ಕಂಡು ಸಂತೋಷವಾಗಿದೆ. ಈ ಕ್ರೀಡಾಂಗಣ ರಾಜ್ಯದ ಸೈಕ್ಲಿಸ್ಟ್‌ಗಳಿಗೂ ಅನುಕೂಲವಾಗಲಿ ಎಂದು ಹಾರೈಸಿದರು. ಜಿಲ್ಲೆಯ ಸೈಕ್ಲಿಸ್ಟ್‌ಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಅನುಕೂಲವಾಗುವಂತೆ ಅಸೋಸಿಯೇಷನ್‌ಗೆ ಶೀಘ್ರ ಎರಡು ಸೈಕಲ್‌ಗಳನ್ನು ಕೊಡಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿ, ವೆಲೋಡ್ರೋಮ್ ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದು, ಸೈಕ್ಲಿಸ್ಟ್‌ಗಳಿಗೆ ಎದುರಾಗುವ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇಲ್ಲಿ ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಕೂಟ ಆಯೋಜಿಸಿದರೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು. ವೆಲೋಡ್ರೋಮ್‌ಗೆ ಪೆವಿಲಿಯನ್ ನಿರ್ಮಿಸುವ ಅಗತ್ಯವಿದ್ದು, ತಜ್ಞರನ್ನು ಕರೆಸಿ ಕ್ರೀಡಾಂಗಣದಲ್ಲಿನ ನ್ಯೂನತೆಗಳನ್ನು ಪರಿಶೀಲಿಸಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್‌ ರಾಜ್ಯಾಧ್ಯಕ್ಷ ರಾಜು ಬಿರಾದಾರ ಮಾತನಾಡಿ, ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಸಹಕಾರ ಹಾಗೂ ವಿಜಯಪುರ ನಗರದ ಮತ್ತು ಜಿಲ್ಲೆಯ ದಾನಿಗಳ ನೆರವಿನಿಂದ ನಿರಂತರವಾಗಿ ಸೈಕ್ಲಿಂಗ್ ಕ್ರೀಡಾಕೂಟಗಳನ್ನು ಆಯೋಜಿಸಲು ಸಾಧ್ಯವಾಗಿದೆ ಎಂದರು.
ಸೈಕ್ಲಿಸ್ಟ್‌ಗಳ ಅಭ್ಯಾಸಕ್ಕೆ ಪೂರಕವಾಗಿ ವೆಲೋಡ್ರೋಮ್ ನಿರ್ಮಾಣವಾಗಿರುವುದು ಉದಯೋನ್ಮುಖ ಕ್ರೀಡಾಪಟುಗಳು ಹಾಗೂ ಅಸೋಸಿಯೇಷನ್ ಪದಾಧಿಕಾರಿಗಳಲ್ಲಿ ಸಂತಸ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟ ಆಯೋಜಿಸುವ ಉದ್ದೇಶವಿದ್ದು, ಜಿಲ್ಲೆಯ ಜನರು ಸೈಕ್ಲಿಂಗ್ ಕ್ರೀಡೆಗೆ ನಿರಂತರ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್), ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್, ಜಿಲ್ಲಾಡಳಿತ, ವಿಜಯಪುರ ಸೈಕ್ಲಿಂಗ್ ಗ್ರೂಪ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಟೂರ್ನಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಪಿಸಿಪಿ ಸುದಾಮ್ ರೋಕಡೆ, ಕಾರ್ಪೋರೇಟರ್ ರಾಹುಲ್ ಜಾಧವ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಆರ್.ಎಸ್. ಪೂಜೇರಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ಗಣ್ಯರು, ಸೈಕ್ಲಿಂಗ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಫಲಿತಾಂಶ ವಿವರ
ವಿಜಯಪುರದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಅಸ್ಮಿತಾ ರಾಜ್ಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ 2026–27ರ ಟೈಮ್ ಟ್ರಯಲ್ ಹಾಗೂ ಸ್ಪ್ರಿಂಟ್ ಸ್ಪರ್ಧೆಗಳಲ್ಲಿ ಪಾಯಲ್ ಚವಾಣ್ ಪ್ರಥಮ ಸ್ಥಾನ ಪಡೆದು ಗಮನ ಸೆಳೆದರು.

ಟೈಮ್ ಟ್ರಯಲ್:
ಪಾಯಲ್ ಚವಾಣ್ 14.289 ನಿಮಿಷಗಳಲ್ಲಿ ಪ್ರಥಮ ಸ್ಥಾನ ಪಡೆದರೆ, ಅಕ್ಷತಾ ಭೂತನಾಳ್ (16.733) ದ್ವಿತೀಯ, ಶೈಲಾ ನ್ಯಾಮಗೌಡ (17.080) ತೃತೀಯ ಹಾಗೂ ಭಾವನಾ ಪಾಟೀಲ್ (18.376) ನಾಲ್ಕನೇ ಸ್ಥಾನ ಪಡೆದರು.

ಸ್ಪ್ರಿಂಟ್:
ಸ್ಪ್ರಿಂಟ್ ಸ್ಪರ್ಧೆಯಲ್ಲಿಯೂ ಪಾಯಲ್ ಚವಾಣ್ 1:26.358 ನಿಮಿಷಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು. ಅಕ್ಷತಾ ಭೂತನಾಳ್ (1:31.037) ದ್ವಿತೀಯ, ಶೈಲಾ ನ್ಯಾಮಗೌಡ (1:31.604) ತೃತೀಯ ಹಾಗೂ ಭವಂ ಪಾಟೀಲ್ (1:43.587) ನಾಲ್ಕನೇ ಸ್ಥಾನ ಪಡೆದರು.

Share this