ಹೋರಾಟಗಾರರ ಮೇಲೆ ದೌರ್ಜನ್ಯ: ಮಾರ್ಕ್ಸ್ ವಾದಿ ಕಮ್ಯುನಿಷ್ಟ ಪಕ್ಷ ಖಂಡನೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 2 : ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಸೇರಿದ್ದ ಚಳವಳಿಕಾರರನ್ನು ಪೊಲೀಸರು ಬಂಧಿಸಿದ್ದು ಅಲ್ಲದೆ, ಜೈಲಿಗಟ್ಟಿ, ಪ್ರತಿಭಟನೆ ನಡೆಸುತ್ತಿದ್ದ ಟೆಂಟ್ ನ್ನು ತೆರವುಗೊಳಿಸಿದ ವಿಜಯಪುರ ಪೋಲೀಸರ ಸರ್ವಾಧಿಕಾರಿ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.
ಹೋರಾಟಗಾರರನ್ನು ಬಂಧಿಸಿ ಜೈಲಿಗಟ್ಟಿದ ಎಲ್ಲ ಹೋರಾಟ ಸಮಿತಿಯ ಮುಖಂಡರನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಸಿಪಿಐಎಂ ಆಗ್ರಹಿಸಿದೆ.
ಜಿಲ್ಲೆಯಲ್ಲಿ ಒಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಿ ಎಂದು ಆಗ್ರಹಿಸಿ ಹೋರಾಟ ನಡೆಸುವುದು ತಪ್ಪೇ ? ನಾವೇನು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವಾ ಅಥವಾ ಸರ್ವಾಧಿಕಾರಿ ರಾಷ್ಟ್ರದಲ್ಲಿದ್ದೇವಾ ಎಂದು ಅದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದೆ.
ಕಳೆದ 106 ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು. ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವ ( ಪಿಪಿಪಿ) ಮಾದರಿಯಲ್ಲಿ ಬೇಡವೆಂಬ ಆಗ್ರಹವನ್ನಿಟ್ಟು ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳು ಸೇರಿ ವಿಜಯಪುರ ನಗರದಲ್ಲಿ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಾ ಬಂದಿರುವುದು ಸರಕಾರಕ್ಕೆ ತಿಳಿದಿದೆ.
ಈ ಹೋರಾಟಕ್ಕೆ ಮಣಿದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಸಕಾರಾತ್ಮಕವಾಗಿರುವುದಾಗಿ ಹೇಳಿದ್ದೂ ಇದೆ. ಆದರೆ ಸಚಿವರು ಮತ್ತು ಸರಕಾರ ಮೆಡಿಕಲ್ ಕಾಲೇಜನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡುವುದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಸರಕಾರದ ಈ ವಿಳಂಬ ನೀತಿಯಿಂದ ಬೇಸತ್ತ ಹೋರಾಟ ಸಮಿತಿಯು, ಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ನಡೆಸಲು ಕಳೆದ ೭-೮ ದಿನಗಳ ಹಿಂದೆಯೆ ನಿರ್ಧರಿಸಿ ಪ್ರಕಟಿಸಿತ್ತು, ಈ ಸಂದರ್ಭದಲ್ಲಿ ಜಿಲ್ಲಾ ಆಡಳಿತ ಅಥವಾ ಉಸ್ತುವಾರಿ ಸಚಿವರು ಹೋರಾಟ ಸಮಿತಿಯ ಜೊತೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಪರಿಹಾರಿಸಲು ಕ್ರಮವಹಿಸಬೇಕಿತ್ತು. ಆದರೆ ಹಾಗೆ ಮಾಡದೇ ಹೋರಾಟಗಳನ್ನು ಹತ್ತಿಕ್ಕುವ ಸರ್ವಾಧಿಕಾರಿ ಕ್ರಮಕ್ಕೆ ಮುಂದಾಗಿರುವುದು ಖಂಡಿತಾ ಅಕ್ಷಮ್ಯವಾಗಿದೆ.
ನಿನ್ನೆ ಮುಗುಳಖೋಡ ಮಠದ ಹತ್ತಿರ ಸೇರಿದ ಪ್ರತಿಭಟನಾಕಾರರನ್ನು ಪೋಲೀಸರು ಬಂದಧಿಸುವಾಗ, ಪೋಲೀಸ್ ಅಧಿಕಾರಿಯೊಬ್ಬರು ಸ್ವಾಮೀಜಿಯ ಮೊಬೈಲ್ ಫೋನ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿರುವುದು ಕೂಡಾ ಖಂಡನೀಯವಾಗಿದೆ. ಈ ಕಾರಣದಿಂದಾಗಿಯೆ ಅಲ್ಲಿ ಪರಿಸ್ಥಿತಿ ಬಿಗಡಾಯಿಸುವಂತಾಗಿದೆ. ಮೊಬೈಲ್ ಫೋನ್ ಕಿತ್ತು ಕೊಳ್ಳಲು ಯತ್ನಿಸಿದ ಅಧಿಕಾರಿಯ ಮೇಲೆ ಸೂಕ್ತ ಕ್ರಮ ವಹಿಸುವಂತೆ ಸಿಪಿಐಎಂ ಸರಕಾರವನ್ನು ಒತ್ತಾಯಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ
ಯು.ಬಸವರಾಜ, ಜಿಲ್ಲಾ ಕಾರ್ಯದರ್ಶಿ
ಭೀಮರಾಯ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಸುರೇಖಾ ರಜಪೂತ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುರೇಶ, ಲಕ್ಷ್ಮಣ ಹಂದ್ರಾಳ,
ಜಿಲ್ಲಾ ಮುಖಂಡ ಅಣ್ಣಾರಾಯ ಈಳಗೇರ, ಸರೇಶ ಜೆ. ಬಿ. ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this