ಬಬಲೇಶ್ವರದಲ್ಲಿ ಮತದಾರರ ಹಕ್ಕಿನ ಮೇಲೆ ದಾಳಿ: ಎಂ.ಬಿ. ಪಾಟೀಲ ಆರೋಪ

ಎಸ್‌ಐಆರ್‌ ಹೆಸರಿನಲ್ಲಿ ಅಕ್ರಮಕ್ಕೆ ಕಡಿವಾಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 26:
ಬಬಲೇಶ್ವರ ಮತಕ್ಷೇತ್ರದ ಮತದಾರರ ಹಕ್ಕಿನ ಮೇಲೆ ದಾಳಿ ನಡೆಸಲು ಮುಂದಾದ ಬಿಜೆಪಿಯವರ ಕೃತ್ಯಕ್ಕೆ ಕಡಿವಾಣ ಹಾಕಲಾಗಿದ್ದು, ಇದಕ್ಕೆ ಪ್ರತಿಯಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ದೇಶದ ವಿವಿಧೆಡೆ ಎಸ್‌ಐಆರ್‌ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ಕೈಬಿಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದೀಗ ತಮ್ಮ ಬಬಲೇಶ್ವರ ಮತಕ್ಷೇತ್ರದಲ್ಲೂ ಇಂತಹ ಗಂಭೀರ ಬೆಳವಣಿಗೆ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ಬಬಲೇಶ್ವರದಲ್ಲಿ ಕೇವಲ 7 ವ್ಯಕ್ತಿಗಳಿಂದ 1,564 ಅರ್ಜಿಗಳು ಸಲ್ಲಿಕೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಅರ್ಜಿಗಳಲ್ಲಿ ಬಹುತೇಕ ಮುಸ್ಲಿಂ ಮತದಾರರ ಹೆಸರುಗಳಿರುವುದು ಉದ್ದೇಶಪೂರ್ವಕ ಕ್ರಮದ ಶಂಕೆ ಮೂಡಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಇಷ್ಟೊಂದು ಅರ್ಜಿಗಳು ಸಲ್ಲಿಕೆಯಾಗಿರುವ ಹಿನ್ನೆಲೆ, ಅವುಗಳನ್ನು ಸ್ವೀಕರಿಸಿ ಅಪ್‌ಲೋಡ್ ಮಾಡಿರುವ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ವಿಚಾರದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಕ್ರಮ ನಡೆದಿರುವುದು ಸಾಬೀತಾದರೆ, ಅದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಎಂ.ಬಿ. ಪಾಟೀಲ ಆಗ್ರಹಿಸಿದ್ದಾರೆ.
“ಒಬ್ಬನೇ ಒಬ್ಬ ಅರ್ಹ ಮತದಾರನ ಮತದಾನದ ಹಕ್ಕಿಗೂ ಧಕ್ಕೆ ಆಗಲು ನಾವು ಬಿಡುವುದಿಲ್ಲ. ಮತದಾನದ ಹಕ್ಕಿನ ರಕ್ಷಣೆಗೆ ಅಗತ್ಯವಿದ್ದರೆ ಕಾನೂನುಬದ್ಧ ಹೋರಾಟಕ್ಕೂ ಸಿದ್ಧ” ಎಂದು ಅವರು ತಿಳಿಸಿದ್ದಾರೆ.
ಮತದಾನದ ಹಕ್ಕು ಪ್ರಜಾಪ್ರಭುತ್ವದ ಜೀವಾಳವಾಗಿದ್ದು, ಅದನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನಕ್ಕೂ ಅವಕಾಶ ನೀಡಬಾರದು. ಕರ್ನಾಟಕದಲ್ಲಾಗಲಿ, ದೇಶದ ಯಾವುದೇ ಭಾಗದಲ್ಲಾಗಲಿ ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಬಬಲೇಶ್ವರದಲ್ಲಿ ಈ ರೀತಿಯ ಪ್ರಕ್ರಿಯೆಗೆ ಮುಂದಾದವರು ಇದೀಗ ತಾವು ನೀಡಿದ್ದ ದೂರನ್ನು ಹಿಂಪಡೆಯಲು ಮರುಅರ್ಜಿ ಸಲ್ಲಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಮತದಾರರ ಹಕ್ಕಿಗೆ ಧಕ್ಕೆ ತರುವ ಯಾವುದೇ ಪ್ರಯತ್ನ ಕಾನೂನುಬದ್ಧ ಪರಿಣಾಮಗಳಿಗೆ ಕಾರಣವಾಗಬಹುದು ಎಂಬುದನ್ನು ಸಂಬಂಧಪಟ್ಟವರು ಅರಿತುಕೊಳ್ಳಬೇಕು. ಬಬಲೇಶ್ವರ ಮತಕ್ಷೇತ್ರದ ಮತದಾರರ ಹಿತ ಹಾಗೂ ಮತದಾನದ ಹಕ್ಕಿನ ರಕ್ಷಣೆಗೆ ಸದಾ ಬದ್ಧರಾಗಿರುವುದಾಗಿ ಎಂ.ಬಿ. ಪಾಟೀಲ ಭರವಸೆ ನೀಡಿದ್ದಾರೆ.

Share this