ಸಂಧಿವಾತ ರೋಗಗಳ ಬಗ್ಗೆ ಜಾಗೃತಿ ಅಗತ್ಯ: ಡಾ. ರಮೇಶ ಜೋಯಿಸ್

ಸಪ್ತಸಾಗರ ವಾರ್ತೆ, ಬೆಂಗಳೂರು, . 26
ಸಂಧಿವಾತ ಹಾಗೂ ಇತರೆ ರುಮಾಟಾಲಜಿ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವೆಂದು ಕರ್ನಾಟಕ ರುಮಾಟಾಲಜಿ ಅಸೋಸಿಯೇಷನ್ ಅಧ್ಯಕ್ಷ ಡಾ ರಮೇಶ್ ಜೋಯಿಸ್ ತಿಳಿಸಿದರು.
ನಗರದ ಲಾಲ್‌ಬಾಗ್ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ ಸಂಧಿವಾತಶಾಸ್ತ್ರ ಜಾಗೃತಿ ವಾಕಥಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಧಿವಾತ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಅತ್ಯಂತ ಮುಖ್ಯ.ಇಂತಹ ಕಾಯಿಲೆಗಳು ವಿರಳವೆಂದು ಹಲವರು ಭಾವಿಸಿದರೂ, ಸರಿಯಾದ ಪರಿಶೀಲನೆ ಇಲ್ಲದಿದ್ದರೆ ಅವು ಗುರುತಾಗುವುದೇ ಇಲ್ಲ. ಲೂಪಸ್, ವಾಸ್ಕುಲೈಟಿಸ್, ಸ್ಕ್ಲೆರೋಡರ್ಮಾ ಮುಂತಾದ ರೋಗಗಳು ರೋಗಿಯನ್ನು ಕೇವಲ ಅಸ್ವಸ್ಥಗೊಳಿಸುವುದಲ್ಲದೆ ಜೀವಕ್ಕೂ ಅಪಾಯ ಉಂಟುಮಾಡಬಹುದು. ಆದ್ದರಿಂದ ಆರಂಭಿಕ ಹಂತದಲ್ಲೇ ಲಕ್ಷಣಗಳನ್ನು ಗುರುತಿಸಿ ತಜ್ಞ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ ಎಂದರು.
ಇದಲ್ಲದೆ, ರುಮಾಟಾಲಜಿ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯವಿರುವ ಆಧುನಿಕ ಔಷಧಿ ಹಾಗೂ ಚಿಕಿತ್ಸೆ ವಿಧಾನಗಳು ಹೆಚ್ಚಿನ ವೆಚ್ಚವನ್ನು ಹೊಂದಿರುವುದರಿಂದ ರೋಗಿಗಳಿಗೆ ಆರ್ಥಿಕ ಭಾರ ಹೆಚ್ಚುತ್ತಿದೆ. ಹಲವು ಸಂದರ್ಭಗಳಲ್ಲಿ ಆರೋಗ್ಯ ವಿಮಾ ಕಂಪನಿಗಳು ಈ ಕಾಯಿಲೆಗಳಿಗೆ ಸಂಬಂಧಿಸಿದ ಪಾಲಿಸಿಗಳನ್ನು ನೀಡಲು ಹಿಂದೇಟು ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ವಿಮಾ ವಲಯದಲ್ಲಿ ನೀತಿ ಬದಲಾವಣೆ ಅಗತ್ಯವಿದ್ದು, ರೋಗಿಗಳಿಗೆ ಸಮರ್ಪಕ ಸೌಲಭ್ಯ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಯುವ ವೈದ್ಯರು ರುಮಾಟಾಲಜಿ ಕ್ಷೇತ್ರವನ್ನು ವೃತ್ತಿಯಾಗಿ ಆಯ್ಕೆಮಾಡುವಂತೆ ಕರೆ ನೀಡಿದ ಅವರು, ದೇಶದಲ್ಲಿ ಈ ವಿಶೇಷತೆಯ ತಜ್ಞರ ಕೊರತೆ ಇರುವುದರಿಂದ ಭವಿಷ್ಯದಲ್ಲಿ ಹೆಚ್ಚಿನ ಅವಕಾಶಗಳಿವೆ. ಜನರಲ್ಲಿ ಅರಿವು ಹೆಚ್ಚಿಸುವುದು, ಲಕ್ಷಣಗಳನ್ನು ತಕ್ಷಣ ಗುರುತಿಸುವುದು ಮತ್ತು ತಜ್ಞರ ಬಳಿ ಚಿಕಿತ್ಸೆಗೆ ಮುಂದಾಗುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿಯಾಗಲಿದೆ ಎಂದರು.
ಜಾಗೃತಿ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ. ಮಹೇಂದ್ರ ನಾಥ್, ಡಾ. ಚಂದ್ರಶೇಖರ, ಡಾ. ಧರ್ಮಾನಂದ್ ಮಾತನಾಡಿದರು.
ಈ ವೇಳೆ ಡಾ. ವಿಕ್ರಮ್ ಜೈನ್, ಡಾ.ನಾಗರಾಜ, ಡಾ.ಹರ್ಷಿಣಿ, ಡಾ.ಚೇತನಾ, ಡಾ.ರಮ್ಯಶ್ರೀ, ಡಾ.ಅನಿರುದ್ಧ, ಡಾ. ಉಮಾ ಕರ್ಜಗಿ , ಸಾರ್ವಜನಿಕರು, ರುಮಟಾಲಜಿ ರೋಗಿಗಳು ಅವರ ಸಂಬಂಧಿಗಳು ಸೇರಿ 300 ಕ್ಕೂ ಹೆಚ್ಚು ಮಂದಿ ವಾಕಥಾನ್ ನಲ್ಲಿ ಪಾಲ್ಗೊಂಡಿದ್ದರು.

Share this