ಬಾಬು ಜಗಜೀವನ ರಾಮ ಸಮ ಸಮಾಜ ನಿರ್ಮಾಣದ ಹರಿಕಾರ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 5: ಹಸಿವು ಮುಕ್ತ ಭಾರತಕ್ಕೆ ಶ್ರಮಿಸಿದ ಬಾಬುಜಿ ಅವರು ಹಸಿರು ಕ್ರಾಂತಿಗೆ ಅಡಿಪಾಯ ಹಾಕಿ, ಸರ್ವ ಜನಾಂಗದ ಕಲ್ಯಾಣಕ್ಕೆ ಶ್ರಮಿಸಿ, ಸಮ ಸಮಾಜ ನಿರ್ಮಾಣಕ್ಕೆ ಬದುಕಿನುದ್ದಕ್ಕೂ ಹೋರಾಡಿದ್ದರು. ಅವರ ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ರವಿವಾರ ಬಾಬು ಜಗಜೀವನ ರಾಮ ಅವರ 119 ನೇ ಜಯಂತಿ ನಿಮಿತ್ತ ಹಮ್ಮಿಕೊಂಡ ಸಮತಾ ದಿವಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಧಿಕಾರ ಮತ್ತು ಆಸ್ತಿಯಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದ ಗಳಿಸಬಹುದೆಂದು ಬಾಬು ಜಗಜೀವನರಾಮ್‌ರ ಬದುಕು ತಿಳಿಸಿ ಕೊಡುತ್ತದೆ.
ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ
ಎಂದು ಅಭಿಪ್ರಾಯಪಟ್ಟರು.
ಅವರು ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ, ಸಮರ್ಪಣಾ ಮನೋಭಾವದ ಹೋರಾಟದಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ಸಾರಿಗೆ, ಆಹಾರ, ರೈಲ್ವೆ, ಕೃಷಿ ಮತ್ತು ಸಮುದಾಯ ಅಭಿವೃದ್ಧಿ, ಕಾರ್ಮಿಕ-ಉದ್ಯೋಗ ಪುನರ್ವಸತಿ ಕೆಲಸವನ್ನು ಮಾಡಿದ ಹಿರಿಮೆ ಅವರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಮಾತನಾಡಿ, ಜಗಜೀವನರಾಮ್ ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದವರು. ಬಡತನವಿದ್ದರೂ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸದೆ ಸುಶಿಕ್ಷಿತರಾದರು. ಇಂದಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ಶಿಕ್ಷಣದಷ್ಟು ಒಳ್ಳೆಯ ಮದ್ದು ಬೇರೊಂದಿಲ್ಲ, ಶೈಕ್ಷಣಿಕವಾಗಿ ಮುಂದೆ ಬನ್ನಿ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಲಕ್ಷ್ಮೀಕಾಂತ ವಡ್ಡರ, ರೇಣುಕಾ ಭಜಂತ್ರಿ, ವೀರೇಶ ಹುಣಶ್ಯಾಳ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.

Share this