ಸಪ್ತಸಾಗರ ವಾರ್ತೆ,ತಾಳಿಕೋಟೆ, ಮೇ. 23 :
ಕಳೆದ ಎರಡು ದಿನಗಳ ಹಿಂದಷ್ಟೇ ಭೀಕರ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಹೊಸಳ್ಳಿ ಗ್ರಾಮದ ರೈತ ಶಾಂತಗೌಡ ಬಿರಾದಾರ ಎಂಬವರ ಸರ್ವೆ ನಂ. 33ರ ಜಮೀನಿನಲ್ಲಿ ಬೆಳೆದಿದ್ದ 5 ಏಕರೆ ಪ್ರದೇಶದಲ್ಲಿಯ ಸಾವಿರಾರು ಬಾಳೆ ಗಿಡಗಳು, ಮುರಿದು ನೆಲಕ್ಕೆ ಬಿದ್ದ ಘಟನೆ ನಡೆದಿದೆ.
ಇನ್ನೇನು ವಾರ ಕಳೆಯುವಷ್ಟರಲ್ಲಿ ಬಾಳೆ ಗೊನೆಗಳನ್ನು ಕಟಾವಿಗೆ ಬಂದಿದ್ದವು. ಒಟ್ಟು 5 ಎಕರೆ ಪ್ರದೇಶದಲ್ಲಿ ಸುಮಾರು 1200 ಕ್ಕೂ ಅಧಿಕ ಬಾಳೆಗಿಡಗಳನ್ನು ಬೆಳೆದಿದ್ದರು. ಆದರೆ ಬಿರುಗಾಳಿ ಸಹಿತ ಸುರಿದ ಮಳೆಗೆ 5 ಎಕರೆ ಸಂಪೂರ್ಣ ಬಾಳೆ ಹಾಳಾಗಿದೆ. ಸುಮಾರು 7 ಲಕ್ಷ ರೂಪಾಯಿ ಖರ್ಚು ಮಾಡಿದ್ದ ಬೆಳೆ ಅಸಲಿಗೂ ಲೆಕ್ಕವಿಲ್ಲದಂತಾಗಿದೆ. ಒಟ್ಟು 80 ಕ್ಕೂ ಹೆಚ್ಚು ಟನ್ ಬಾಳೆ ನೆಲಕಚ್ಚಿದ್ದು ಸುಮಾರು 15ಲಕ್ಷಕ್ಕೂ ಅಧಿಕ ಮೊತ್ತದಷ್ಟು ರೈತನಿಗೆ ನಷ್ಟವಾಗಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಶಾಂತಗೌಡ ಬಿರಾದಾರ ಒತ್ತಾಯಿಸಿದ್ದಾರೆ.
ತಾಲೂಕಿನಾದ್ಯಂತ ಕಬ್ಬು ಬಾಳೆ, ನಿಂಬೆಗಿಡಗಳು ಬಿರುಗಾಳಿಗೆ ನೆಲಕಚ್ಚಿಬಿದ್ದ ಬಗ್ಗೆ ವರದಿಯಾಗಿದೆ. ಇನ್ನೂ ಗ್ರಾಮೀಣ ಪ್ರದೇಶದ ಕೆಲವೆಡೆ ಮರಗಳು ನೆಲಕ್ಕುರಳಿ ಬಿದ್ದ ಬಗ್ಗೆಯೂ ವರದಿಯಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರೈತನಿಗಾದ ನಷ್ಟವನ್ನು ಭರಿಸಿ ಅನ್ನದಾತರ ಕೈ ಹಿಡಿಯಬೇಕಾಗಿದೆ.
ಬಿರುಗಾಳಿ ಸಹಿತ ಮಳೆಗೆ ನೆಲಕ್ಕೆ ಬಿದ್ದ ಬಾಳೆ:15 ಲಕ್ಷಕ್ಕೂ ಅಧಿಕ ಹಾನಿ


