ಸೆ. 1ರಿಂದ ಬಸವ ಸಂಸ್ಕೃತಿ ಅಭಿಯಾನ ಆರಂಭ

ಸಪ್ತಸಾಗರ ವಾರ್ತೆ ವಿಜಯಪುರ, ಆ. 28 :
ಬಸವ ಸಂಸ್ಕೃತಿ ವಿಶ್ವ ಸಂಸ್ಕೃತಿ. ಈ ಸಂಸ್ಕೃತಿಯ ಶ್ರೇಷ್ಠತೆಯ ಪ್ರಸಾರಕ್ಕಾಗಿ ಬಸವ ಸಂಸ್ಕೃತಿ ಅಭಿಯಾನವನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ಸಂಘಟಿಸಲಾಗಿದ್ದು, ಸೆ.೧ ರಿಂದ ಬಸವ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ಈ ಅಭಿಯಾನ ಆರಂಭಗೊಳ್ಳಲಿದ್ದು ಅ.೧ರವರೆಗೆ ಬಸವ ಸಂಸ್ಕೃತಿ ಅಭಿಯಾನ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಲುಪಲಿದೆ ಎಂದು ಬಸವನ ಬಾಗೇವಾಡಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ಆಶಯಗಳನ್ನು ಬಿತ್ತುವ ದೃಷ್ಟಿಯಿಂದ ಈ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಸೆ.೧ ರಂದು ಬಸವನ ಬಾಗೇವಾಡಿಯಲ್ಲಿ ಸಂಜೆ ೬ ಕ್ಕೆ ಬಸವೇಶ್ವರ ಸಿಬಿಎಸ್‌ಐ ಶಾಲೆಯ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಈ ಅಭಿಯಾನಕ್ಕೆ ವಿದ್ಯುಕ್ತವಾಗಿ ಸಂಚರಿಸಲಿದೆ. ಅದಕ್ಕೂ ಮುನ್ನ ಬಸವಜನ್ಮ ಸ್ಮಾರಕದಿಂದ ಅಭಿಯಾನ ಉದ್ಘಾಟನೆಯಾಗುವ ಸ್ಥಳದವರೆಗೆ ಬೃಹತ್ ಪಾದಯಾತ್ರೆ ನಡೆಯಲಿದೆ. ಹುಬ್ಬಳ್ಳಿ ಮೂರು ಸಾವಿರಮಠದ ಶ್ರೀ ಡಾ.ಗುರುಸಿದ್ಧರಾಜಯೋಗಿಂದ್ರ ಮಹಾಸ್ವಾಮಿಜಿ, ಶಿವಮೊಗ್ಗದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಡಾ.ಗಂಗಾಮಾತಾಜಿ ಸೇರಿದಂತೆ ಹಲವಾರು ಮಠಾಧೀಶರ ಪಾವನ ಸಾನ್ನಿಧ್ಯದಲ್ಲಿ ಅಭಿಯಾನಕ್ಕೆ ಚಾಲನೆ ದೊರಕಲಿದೆ. `ಮಾತು ವಚನವಾಗಬೇಕು’ ಎಂಬ ವಿಷಯದ ಕುರಿತು ಖ್ಯಾತ ಸಾಹಿತಿ ವೀರಣ್ಣ ರಾಜೂರ ಹಾಗೂ ಶಿವಶರಣೆಯರೆ ಜೀವನಾದರ್ಶ ಎಂಬ ವಿಷಯದ ಕುರಿತು ಡಾ.ಮೀನಾಕ್ಷಿ ಬಾಳಿ ಉಪನ್ಯಾಸ ಮಂಡಿಸಲಿದ್ದು, ಸಚಿವರಾದ ಡಾ.ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಉಪಸ್ಥಿತರಿರುವರು ಎಂದರು.
ಅಂದು ಆರಂಭವಾಗುವ ಅಭಿಯಾನ ಹಾಗೂ ಅಭಿಯಾನಕ್ಕಾಗಿ ಸಿದ್ಧಪಡಿಸಿದ ಬಸವಾದಿ ಶರಣರ ರಥ ಕಲಬುರ್ಗಿ, ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಬೆಂಗಳೂರು ನಗರಕ್ಕೆ ತಲುಪಿ ಸಂಪನ್ನಗೊಳ್ಳಲಿದೆ ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ವೀರಶೈವ ಹಾಗೂ ಲಿಂಗಾಯತದಲ್ಲಿ ಆಗಿರುವ ಎಲ್ಲ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಒಟ್ಟಿಗೆ ಹೋಗುವ ನಿಟ್ಟಿನಲ್ಲಿ ಮೊನ್ನೆ ಮಹತ್ವದ ಚರ್ಚೆ ನಡೆದಿದೆ. ಹೀಗಾಗಿ ಸಾಮರಸ್ಯ ಕಾಪಾಡಿಕೊಂಡು ಹೋಗಲು ಎರಡು ಕಡೆ ಮನವಿ ಮಾಡಿಕೊಳ್ಳಲಾಗಿದೆ. ಒಟ್ಟಾಗಿ ಹೋಗುವ ಪ್ರಯತ್ನ ನಡೆದಿದೆ ಎಂದರು.
ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಸರ್ಕಾರ ಅನುದಾನ ಒದಗಿಸದೇ ಹೋದರೆ ಸ್ಥಳೀಯ ಸಂಪನ್ಮೂಲಗಳಿಂದ ಅರ್ಧ ಅನುದಾನ ಪ್ರಾಧಿಕಾರ ಬಳಕೆ ಮಾಡುವ ನಿಟ್ಟಿನಲ್ಲಿಯೂ ಕ್ರಮ ವಹಿಸಲಾಗುವುದು ಎಂದರು.
ಸಂಘಟಕ ಬಸನಗೌಡ ಹರನಾಳ ಮಾತನಾಡಿ, ಬಸವ ಸಂಸ್ಕೃತಿ ವಿಶ್ವ ಸಂಸ್ಕೃತಿ, ನಮ್ಮಲ್ಲಿ ಯಾವ ಬೇಧವಿಲ್ಲ. ಈ ಬಸವಾದಿ ಶರಣರ ಆಶಯವನ್ನು ತಿಳಿಸುವುದಕ್ಕಾಗಿಯೇ ಈ ಅಭಿಯಾನ ನಡೆಸಲಾಗುತ್ತಿದ್ದು, ೧,೧೦೦ ಮಹಿಳೆಯರು ವಚನ ಪುಸ್ತಕಗಳ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿ.ಸಿ. ನಾಗಠಾಣ, ಸಾಹಿತಿ ಜಂಬುನಾಥ ಕಂಚ್ಯಾಣಿ ಸೇರಿದಂತೆ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Share