ಬಸವಣ್ಣನವರ ತತ್ವ, ಆದರ್ಶಗಳು ಸಪ್ತಸಾಗರದ ಆಚೆಗೂ ಹರಡಬೇಕಿದೆ: ಚನ್ನಬಸವ ಸ್ವಾಮೀಜಿ

ಸಪ್ತಸಾಗರ ವಾರ್ತೆ ವಿಜಯಪುರ, ಆ. 5: ಸಾಮಾಜಿಕ ಸಮಾನತೆಯ ಹರಿಕಾರರಾದ ಬಸವಣ್ಣನವರ ತತ್ವ, ಆದರ್ಶಗಳು ಇಂದು ಸಪ್ತಸಾಗರದಾಚೆಗೂ ಹರಡಬೇಕಾದ ಅವಶ್ಯಕತೆ ಬಂದೊದಗಿದೆ. ಆ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ~ ಎಂದು ಅಥಣಿಯ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಹೇಳಿದರು. ಬಸವನಬಾಗೇವಾಡಿ ತಾಲೂಕಿನ ರಾಬಿನಾಳ ಗ್ರಾಮದಲ್ಲಿ ರಾಷ್ಟ್ರೀಯ ಬಸವಸೈನ್ಯ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಚಿಂತನ ಮಂಥನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ದೇವರು ನಮಗೆ ಎರಡು ಕೈಗಳನ್ನು ನೀಡಿದ್ದು, ಒಂದು ನಮ್ಮ ಕುಟುಂಬದ ನಿರ್ವಹಣೆಗಾದರೆ, ಇನ್ನೊಂದು ದುಡಿಮೆ ಮಾಡಿ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ವಿಶ್ವಗುರು ಬಸವಣ್ಣ ಕರೆ ನೀಡಿದ್ದರು. ಆ ತತ್ವಗಳ ಅನುಷ್ಠಾನ ಇಂದು ಆಗಬೇಕಿದೆ ಎಂದರು.
ವಿಶ್ವಗುರು ಬಸವಣ್ಣನವರನ್ನು ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಂದು ವರ್ಷ ಗತಿಸಿದ ಸಂದರ್ಭದಲ್ಲಿ ಬಸವನಬಾಗೇವಾಡಿಯಲ್ಲಿ ಸೆಪ್ಟೆಂಬರ 1ರಂದು ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಯಶಸ್ವಿಗೆ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮನವಿ ಮಾಡಿದರು.
ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಶಂಕರಗೌಡ ಬಿರಾದಾರ ಮಾತನಾಡಿ, ಬಸವಣ್ಣನವರ ತತ್ವ, ಆದರ್ಶ ಮತ್ತು ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವುದರ ಜೊತೆಗೆ ಬಸವಣ್ಣನವರು 12ನೇ ಶತಮಾನದಲ್ಲಿ ಶಿಕ್ಷಣದಿಂದ ವಂಚಿತರಾದ ತಳಸಮುದಾಯದ ಜನರಿಗೆ ಶರಣ ತತ್ವ ಮತ್ತು ಚಿಂತನಾ ಗೋಷ್ಠಿಗಳ ಮೂಲಕ ಶಿಕ್ಷಣದ ಜ್ಞಾನ ನೀಡಿದ್ದಾರೆ ಎಂದರು.
ರೈತ ಮುಖಂಡ ಅರವಿಂದ ಕುಲಕರ್ಣಿ, ರಾಷ್ಟ್ರೀಯ ಬಸವಸೈನ್ಯದ ಸಂಚಾಲಕ ಶ್ರೀಕಾಂತ ಕೊಟ್ರಶೆಟ್ಟಿ, ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಅಣ್ಣಾರಾಯಗೌಡ ಬಿರಾದಾರ ಮಾತನಾಡಿದರು.
ರಾಷ್ಟ್ರೀಯ ಬಸವಸೈನ್ಯದ ತಾಲೂಕ ಅಧ್ಯಕ್ಷ ಸಂಜು ಬಿರಾದಾರ, ಸುನೀಲ ಚಿಕ್ಕೊಂಡ, ಮಂಜುನಾಥ ಜಾಲಗೇರಿ, ಪರಮಾನಂದ ಮುತ್ಯಾ, ಶಿಕ್ಷಕರಾದ ಕೆ ಬಿ ಕಡಗೋಲ, ಆರ್.ಬಿ. ಮೋಟಗಿ, ರಮೇಶಗೌಡ ಬಿರಾದಾರ, ಸಂಗಣ್ಣ ಸಿಂಧೂರ, ರಾಚನಗೌಡ ಪಾಟೀಲ, ಸಂಗಮೇಶ ಹಾದಿಮನಿ ಇದ್ದರು. ಬಸವರಾಜ ಗೂಡೂರು ಸ್ವಾಗತಿಸಿದರು. ಪ್ರೊ.ಮುರುಗಯ್ಯ ಶಿರಸಂಗಿ ನಿರೂಪಿಸಿದರು. ಗ್ರಾಮ ಘಟಕದ ಅಧ್ಯಕ್ಷ ಗುರಣ್ಣಗೌಡ ಬಿರಾದಾರ ವಂದಿಸಿದರು.
ಕಾರ್ಯಕ್ರಮಕ್ಕೂ ಮುಂಚೆ ಶ್ರೀಗಳನ್ನು ಸಕಲ ಮಂಗಲ ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.

Share