ಬಸವ ಜನ್ಮಭೂಮಿ ಶೈಕ್ಷಣಿಕ ಕ್ರಾಂತಿ-ಸಚಿವ ಶಿವಾನಂದ ಪಾಟೀಲ

ಸಪ್ತಸಾಗರ ವಾರ್ತೆ,ಕೊಲ್ಹಾರ, ಡಿ. 28 : ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದ ಈ ಪ್ರದೇಶದಲ್ಲಿ ಇದೀಗ ಭವಿಷ್ಯದ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ರಾತ್ರಿ ತಾಲೂಕಿನ ಮಲಘಾಣ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕಟ್ಟಡ, ತಾಂಡಾ ಹಾಗೂ ಗ್ರಾಮದ ಮಕ್ಕಳಿಗೆ ಪ್ರತ್ಯೇಕವಾಗಿ ಅಂಗನವಾಡಿ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಸಚಿವರು, ಈ ಹಿಂದೆ ಸಾಕ್ಷರತೆಯಲ್ಲಿ ಅತ್ಯಂತ ಹಿಂದುಳಿದಿದ್ದ ಈ ಭಾಗದಲ್ಲಿ ಈಗ ಶೈಕ್ಷಣಿಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದರಿಂದ ಶೈಕ್ಷಣಿಕ ಪ್ರಗತಿ ಸಾಧ್ಯವಾಗಿದೆ. ಮಲಘಾಣ ಗ್ರಾಮಸ್ಥರ ಕೋರಿಕೆಯಂತೆ ಸರ್ಕಾರಿ ಪದವಿ ಪೂರ್ವ ಕಾಲೇಜು ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಶೈಕ್ಷಣಿಕ ಪ್ರಗತಿಯಿಂದ ಉತ್ತಮ ನಾಗರಿಕ ಸಮಾಜ ನಿರ್ಮಾಣ ಸಾಧ್ಯವಿದೆ. ಹೀಗಾಗಿ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡುತ್ತಿದ್ದೇನೆ ಎಂದು ವಿವರಿಸಿದರು.
ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಮಾದರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸುರೇಶ ವಠಾರ, ಅಶೋಕ ನಿಂಗನೂರ, ರವೀಂದ್ರ ಕಲಗುರ್ಕಿ, ನಿವೃತ್ತ ಮುಖ್ಯಗಯರುಗಳಾದ ಎಸ್.ಎಸ್.ಗರಸಂಗಿ, ವಕೀಲರಾದ ಸದಾನಂದ ನಿಂಗನೂರ, ತಾ.ಪಂ. ಇಒ ಸುನೀಲ್ ಮದ್ದೀನ, ಬಿಇಒ ವಸಂತ ರಾಠೋಡ, ಸಿಡಿಪಿಒ ಶಿಲ್ಪಾ ಹಿರೇಮಠ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪುಟ್ಟು ಪಾಟೀಲ ಸ್ವಾಗತಿಸಿ, ನಿರೂಪಿಸಿದರು.

Share this