ಬಡವರು, ಸಣ್ಣ ಉದ್ಯಮಿಗಳ ಆರ್ಥಿಕ ಸಬಲೀಕರಣಕ್ಕೆ ಭವಾನಿ ಬ್ಯಾಂಕ್‌ ಬದ್ಧ 

ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ; ಬ್ಯಾಂಕ್‌ನ ಸೇವೆ ಸದ್ಬಳಕೆಗೆ ಅಧ್ಯಕ್ಷೆ ಕಮಲಾಬಾಯಿ ನಾಯಕ್ ಕರೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ.13:
ಬಡವರು, ಸಣ್ಣ ಉದ್ಯಮಿಗಳು ಹಾಗೂ ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಭವಾನಿ ಬಂಜಾರಾ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದು, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸೇರಿದಂತೆ ವಿವಿಧ ಜನಪರ ಸೇವೆಗಳನ್ನು ಒದಗಿಸುತ್ತಿದೆ ಎಂದು ಬ್ಯಾಂಕ್‌ ಅಧ್ಯಕ್ಷೆ ಕಮಲಾಬಾಯಿ ಎನ್. ನಾಯಕ್ ಹೇಳಿದರು.
ನಗರದ ಆದರ್ಶನಗರ ಬಡಾವಣೆಯಲ್ಲಿ ಶನಿವಾರ ನಡೆದ ಭವಾನಿ ಬಂಜಾರಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್‌ನ 19ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಧ್ಯಕ್ಷೀಯ ಸಂದೇಶ ಮಂಡಿಸಿ ಅವರು ಮಾತನಾಡಿದರು.
ಸಮಾಜದ ಬಡವರು ಹಾಗೂ ಸಣ್ಣ ಉದ್ಯಮಿಗಳಿಗೆ ಆರ್ಥಿಕವಾಗಿ ನೆರವಾಗುವುದು ಬ್ಯಾಂಕಿನ ಪ್ರಮುಖ ಉದ್ದೇಶವಾಗಿದೆ. ಜನರ ಅಗತ್ಯಕ್ಕೆ ಸ್ಪಂದಿಸುವ ಹಲವು ಸೌಲಭ್ಯಗಳನ್ನು ಬ್ಯಾಂಕ್‌ ಒದಗಿಸುತ್ತಿದ್ದು, ಸದಸ್ಯರು ಹಾಗೂ ಸಾರ್ವಜನಿಕರು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಕರೆ ನೀಡಿದರು.
ನಿರ್ದೇಶಕ ಗಣಪತಿ ರಾಠೋಡ ಅವರು ನಿರ್ದೇಶಕರ ವರದಿ ಮಂಡಿಸಿ, ಬ್ಯಾಂಕ್‌ ಎಲ್ಲ ದೃಷ್ಟಿಯಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಸದಸ್ಯರು ಹಾಗೂ ಸಮಾಜದ ಹಿತದೃಷ್ಟಿಯಿಂದ ಇನ್ನಷ್ಟು ಉಪಯುಕ್ತ ಯೋಜನೆಗಳನ್ನು ಜಾರಿಗೆ ತರಲು ಆಡಳಿತ ಮಂಡಳಿ ಉದ್ದೇಶಿಸಿದೆ ಎಂದರು.
ನಿರ್ದೇಶಕ ವಾಲು ಚವ್ಹಾಣ್ ಅವರು 2024-25ರಿಂದ 2026-27ನೇ ಸಾಲಿನವರೆಗೆ ಆಡಳಿತ ಮಂಡಳಿ ಕೈಗೊಂಡಿರುವ ವಿವಿಧ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಬ್ಯಾಂಕ್‌ನ ವ್ಯವಸ್ಥಾಪಕ ಬಸವಪ್ರಭು ಸಜ್ಜನ ಅವರು ಜಮಾ-ಖರ್ಚು ಹಾಗೂ ಬ್ಯಾಂಕಿನ ಹಣಕಾಸಿನ ವಿವರಗಳನ್ನು ಸಭೆಯ ಮುಂದಿಟ್ಟರು.
ಸಭೆಯಲ್ಲಿ ಉಪಾಧ್ಯಕ್ಷ ಶ್ರೀಮಂತ ಆಂಗಡಿ, ನಿರ್ದೇಶಕಿ ಇಂದುಮತಿ ಲಮಾಣಿ, ಗೀತಾಂಜಲಿ ದೇವಜಿ, ಪದ್ದು ಚವ್ಹಾಣ್, ವಾಲು ಚವ್ಹಾಣ್, ಗಣಪತಿ ರಾಠೋಡ, ಮಲ್ಲಪ್ಪ ಮಸಳಿ, ಡಾ. ಅಶೋಕ ನಾಯಕ್, ಎಸ್.ಎಸ್. ಸಜ್ಜನ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಷೇರುದಾರರು ಭಾಗವಹಿಸಿದ್ದರು.
ಇಂದುಮತಿ ಲಮಾಣಿ ಪ್ರಾರ್ಥನೆ ನೆರವೇರಿಸಿದರು. ಮಲ್ಲಪ್ಪ ಮಸಳಿ ಸ್ವಾಗತಿಸಿದರು. ಎಸ್.ಎಸ್. ಸಜ್ಜನ ವಂದನಾರ್ಪಣೆ ಮಾಡಿದರು.

Share this