ಮಾ.14 ರಂದು ರಂಭಾಪುರಿ ಶಾಖಾ ಪೀಠದ ಭೂಮಿ ಪೂಜೆ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 7 :
ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಪೀಠ ಖಾಸಾ ಶಾಖಾ ಬಾಳೆಹೊನ್ನೂರು ಬೃಹನ್ಮಠದ ಭೂಮಿ ಪೂಜೆಯನ್ನು ಮಾ.14 ರಂದು ಶನಿವಾರ ಸಂಜೆ 4.30 ಗಂಟೆಗೆ ಜರುಗಲಿದೆ ಎಂದು ಆಲಮೇಲದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಪ.ಗು.ಹಳಕಟ್ಟಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ರಂಭಾಪುರಿ ಪೀಠ ಹಾಗೂ ಶಾಲೆ ಕಾಲೇಜು ಸೇರಿದಂತೆ ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಈ ನಾಡು ಬಹಳಷ್ಟು ಧಾರ್ಮಿಕ ಶ್ರೀಮಂತಿಕೆ ಹೊಂದಿದೆ. ರಂಭಾಪುರಿ ಪೀಠ ಪಂಚ ಪೀಠಗಳಲ್ಲಿ ಅತೀ ದೊಡ್ಡದು. ಅದರ ಅಡಿಯಲ್ಲಿ 12000 ಸಾವಿರ ಶಾಖಾ ಮಠಗಳು ಕಾರ್ಯನಿರ್ವಹಿಸುತ್ತಿದ್ದು ಶಿಕ್ಷಣ, ಆರೋಗ್ಯ ಸೇರಿದಂತೆ ಧಾರ್ಮಿಕ ಕಾರ್ಯಗಳಲ್ಲಿ ಸೇವೆಯನ್ನು ಮಾಡುತ್ತಿವೆ.
ವಿಜಯಪುರದಲ್ಲಿ ಶಾಖಾ ಮಠವನ್ನು ಪ್ರಾರಂಭ ಮಾಡಬೇಕು ಎನ್ನುವುದು ಮಠಾಧೀಶರು ಹಾಗೂ ಭಕ್ತರ ಬಹುದಿನಗಳ ಆಸೆಯಾಗಿತ್ತು. ಆ ಹಿನ್ನೆಲೆಯಲ್ಲಿ ಶ್ರೀಗಳು ಅಖಂಡ ವಿಜಯಪುರ ಜಿಲ್ಲೆಯಲ್ಲಿ ಅಂದರೆ ವಿಜಯಪುರ ನಗರದಲ್ಲೇ ಶಾಖಾ ಮಠ ಪ್ರಾರಂಭ ಮಾಡಲು ನಿರ್ಧರಿಸಿ ಸಚಿವ ಎಂ.ಬಿ.ಪಾಟೀಲ್ ಅವರ ಗಮನಕ್ಕೆ ತಂದಾಗ ಸಂತೋಷದಿಂದಲೇ ಪೂರ್ಣ ಪ್ರಮಾಣದ ಸಹಕಾರ ನೀಡಿದರು. ಆ ಹಿನ್ನೆಲೆಯಲ್ಲಿ ಭೂಮಿ ಪೂಜೆ ನಡೆಯುತ್ತಿದೆ. ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಸಚಿವ ಎಂ.ಬಿ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಮದಾಪುರದ ಮುರುಘೇಂದ್ರ ಮಹಾಸ್ವಾಮಿಗಳು ಮಾತನಾಡಿ, ಸುರಭಿ ಬಡಾವಣೆಯಲ್ಲಿ ಸುಮಾರು ೬೦೦೦ ಚದರ ಅಡಿ ವಿಸ್ತಿರ್ಣದಲ್ಲಿ ರಂಭಾಪುರಿ ಶಾಖಾ ಮಠದ ಭವನ ನಿರ್ಮಾಣವಾಗಲಿದೆ. ಈ ಭೂಮಿ ಪೂಜೆ ಕಾರ್ಯಕ್ರಮದಲ್ಲಿ 100 ರಿಂದ 150 ಜನ ನಾಡಿನ ಪೂಜ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ತಡವಲಗಾ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ್ ಸಂಬಣ್ಣಿ, ಲಿಂಗಾಯತ ಮುಖಂಡ ಸೋಮಯ್ಯ ಗಣಾಚಾರಿ ಉಪಸ್ಥಿತರಿದ್ದರು.

Share this