ಸಪ್ತಸಾಗರ ವಾರ್ತೆ, ವಿಜಯಪುರ, ಜೂ. 29 :
ವಿಶೇಷ ಚೇತನ ಮಕ್ಕಳ ಆರೋಗ್ಯ ಹಿತರಕ್ಷಣೆ ಹಾಗೂ ಶೈಕ್ಷಣಿಕ ಕಳಕಳಿಗೆ ಬಿ.ಎಲ್.ಡಿ.ಇ ಸಂಸ್ಥೆ ಮಾನವೀಯ ಕಳಕಳಿಯ ಹೆಜ್ಜೆ ಇರಿಸಿದ್ದು ವಿಶೇಷ ಚೇತನ ಮಕ್ಕಳಿಗೆ ಸಮನ್ವಯ ಶಿಕ್ಷಣವನ್ನು ನೀಡಲು ಸುಸಜ್ಜಿತ ತರಬೇತಿ ಕೇಂದ್ರ ಹಾಗೂ ವಿಶೇಷ ಶಾಲೆ ಸ್ಥಾಪಿಸುವ ಉದ್ದೇಶದಿಂದ ಸಂಭವ ಟ್ರಸ್ಟ್ ಜೊತೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಹಾಗೂ ಸಮನ್ವಯ ಟ್ರಸ್ಟ್ ಪ್ರಮುಖರ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿ ಪರಸ್ಪರ ಪತ್ರಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಈ ಕುರಿತು ವಿವರಣೆ ನೀಡಿದ ಬಿ.ಎಲ್.ಡಿ.ಇ ಸಂಸ್ಥೆ ಪ್ರಧಾನ ಕಾರ್ಯದರ್ಶಿಗಳೂ ಆಗಿರುವ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಈ ಒಪ್ಪಂದದ ಅನ್ವಯ, ಸಂಭವ ಟ್ರಸ್ಟ್ ಆವರಣದಲ್ಲಿರುವ ಸುಸಜ್ಜಿತ ಹಾಗೂ ಸಕಲ ಸೌಲಭ್ಯಗಳುಳ್ಳ ಕಟ್ಟಡದಲ್ಲಿ ವಿಕಲಚೇತನ ಮಕ್ಕಳಿಗಾಗಿ ನೂತನ ಶಾಲೆಯನ್ನು ಆರಂಭಿಸಲು ಉದ್ದೇಶಿಸಲಾಗಿದೆ. ವಿಕಲಚೇತನ ಮಕ್ಕಳಿಗೆ ಸಮಾಜದ ಮುಖ್ಯವಾಹಿನಿಯಲ್ಲಿ, ಸಮಾನ ಶಿಕ್ಷಣದ ಅವಕಾಶಗಳನ್ನು ಕಲ್ಪಿಸುವುದು ಮತ್ತು ಅವರಲ್ಲಿ ಆತ್ಮವಿಶ್ವಾಸ ತುಂಬಿ ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಜಂಟಿ ಯೋಜನೆಯ ಪ್ರಮುಖ ಆಶಯವಾಗಿದೆ ಎಂದರು.
ಶೀಘ್ರದಲ್ಲೇ ಶಾಲೆಯ ಆರಂಭಿಕ ಪ್ರಕ್ರಿಯೆಗಳು ಮತ್ತು ತರಬೇತಿ ಕೇಂದ್ರದ ಕಾರ್ಯಚಟುವಟಿಕೆಗಳು ಅಧಿಕೃತವಾಗಿ ಚಾಲನೆ ಪಡೆಯಲಿವೆ ಎಂದರು.
ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಉಚಿತ ಸ್ಕೂಲ್ ಕಿಟ್ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ನೀಡುವ ಮೂಲಕ ಅವರ ಶಿಕ್ಷಣ ಅರ್ಧಕ್ಕೆ ನಿಲ್ಲದಂತೆ ನೋಡಿಕೊಳ್ಳುತ್ತಿರುವ ಸಂಭವ ಟ್ರಸ್ಟ್ ಜೊತೆ ಈ ಮಹತ್ವದ ಕಾರ್ಯವನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ವಿಕಲ ಚೇತನ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ, ಗುಣಮಟ್ಟದ ಶಿಕ್ಷಣ, ಚಿಕಿತ್ಸಾ ಸೇವೆಗಳು, ವೃತ್ತಿಪರ ತರಬೇತಿ ಮತ್ತು ಜೀವನ ಕೌಶಲ್ಯಗಳನ್ನು ನೀಡುವ ಮೂಲಕ ಅವರನ್ನು ಆತ್ಮವಿಶ್ವಾಸಿ, ಸ್ವಾವಲಂಬಿ ಹಾಗೂ ಸಮಾಜದ ಗೌರವಾನ್ವಿತ ಸದಸ್ಯರನ್ನಾಗಿ ರೂಪಿಸುವ ಶಾಲೆಯನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದ್ದು,
ವಿಕಲ ಚೇತನ ಮಕ್ಕಳನ್ನು ಸಾಮಾನ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಒಳಗೊಳ್ಳಿಸುವುದು,
ಎಲ್ಲಾ ಮಕ್ಕಳಿಗೂ ಸಮಾನ ಅವಕಾಶ ಮತ್ತು ಗೌರವ ಒದಗಿಸುವುದು ಹಾಗೂ
ಮಕ್ಕಳ ವೈಯಕ್ತಿಕ ಸಾಮರ್ಥ್ಯಕ್ಕೆ ಅನುಗುಣವಾದ ಬೋಧನಾ ವಿಧಾನಗಳನ್ನು ಬಳಸುವ ಉದ್ದೇಶ ಹೊಂದಲಾಗಿದೆ ಎಂದರು.
ಶಿಕ್ಷಣದ ಜೊತೆಗೆ ಆರೋಗ್ಯಕ್ಕೆ ಒತ್ತು
ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪೂರಕ ಆರೋಗ್ಯ ಸೌಲಭ್ಯ ಹಾಗೂ ಸೇವೆ ಒದಗಿಸುವ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ಸುನೀಲಗೌಡ ಪಾಟೀಲ ವಿವರಿಸಿದರು. ವಿಶೇಷ ಶಿಕ್ಷಕರು ಮತ್ತು ತರಬೇತುದಾರರಿಂದ ತರಬೇತಿ,
ಸ್ಪೀಚ್ ಥೆರಪಿ, ಫಿಸಿಯೋಥೆರಪಿ, ಆಕ್ಯುಪೇಶನಲ್ ಥೆರಪಿ ನೀಡಲಾಗುತ್ತಿದೆ,
ಸಹಾಯಕ ಶಿಕ್ಷಣ ಸಾಮಗ್ರಿಗಳನ್ನು ಅಳವಡಿಸಲಾಗುತ್ತಿದ್ದು,
ಪೋಷಕರ ಮಾರ್ಗದರ್ಶನ ಮತ್ತು ಸಮಾಲೋಚನೆ ನಿರಂತರವಾಗಿ ನಡೆಯಲಿದೆ ಎಂದರು.
ಉದ್ಯಮಿ ರಾಜೇಂದ್ರ ರುಣವಾಲ್ ಅವರು ಕೋಟಿ ಕೋಟಿ ಬೆಲೆ ಬಾಳುವ ಜಾಗವನ್ನು ಈ ಸಂಸ್ಥೆಗೆ ನೀಡಿದ್ದಾರೆ. ಇದು ಅನುಪಮ ಸೇವಾ ಕಾರ್ಯ ಎಂದರು.
ಸಂಭವ ಟ್ರಸ್ಟ್ ಪ್ರಮುಖರಾದ ಅಭಿನವ ರುಣವಾಲ್, ಬಿ.ಎಲ್.ಡಿ.ಇ ವೈದ್ಯಕೀಯ ವಿವಿ ಉಪ ಕುಲಪತಿ ಪ್ರೊ.ಜಯರಾಜ್, ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ, ಡಾ. ಐ.ಎಸ್. ಕಾಳಪ್ಪನವರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


