ಮಕ್ಕಳ ಸರಳ ಕಲಿಕೆಗೆ ದ್ವಿಭಾಷಾ ಮಾಧ್ಯಮ ಅಗತ್ಯ-ಎಸ್.ಆರ್. ನಡುಗಡ್ಡಿ ಅಭಿಮತ

ಸಪ್ತಸಾಗರ ವಾರ್ತೆ,ಇಂಡಿ, ಏ. 11: ದ್ವಿಭಾಷಾ ಮಾಧ್ಯಮವು 2026-27 ನೇ ಶೈಕ್ಷಣಿಕ ವರ್ಷದಿಂದ 1 ರಿಂದ 5 ನೇ ವರ್ಗದ ವಿಷಯಗಳನ್ನು ಮಾತೃಭಾಷೆ ಮತ್ತು ಇಂಗ್ಲಿಷ್ ನಲ್ಲಿ ಬೋಧಿಸಲು ಬಳಸುವ ಶಿಕ್ಷಣ ಪದ್ಧತಿಯಾಗಿದ್ದು, ಇದು ಜಾಗತಿಕ ಸ್ಪರ್ಧೆಗೆ ಮಕ್ಕಳನ್ನು ಸಿದ್ಧಗೊಳಿಸುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್. ನಡುಗಡ್ಡಿ ಹೇಳಿದರು.
ಶನಿವಾರ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವಿಜಯಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ಇವರ ಸಹಯೋಗದಲ್ಲಿ ಜರುಗಿದ
1-5 ನೇ ವರ್ಗದ ಶಿಕ್ಷಕರ ದ್ವಿಭಾಷಾ ತರಬೇತಿಯ 2ನೇ ಹಂತದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದ್ವಿಭಾಷಾ ಮಾಧ್ಯಮವು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ, ವಿಷಯದ ಆಳವಾದ ತಿಳುವಳಿಕೆಗೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಅತ್ಯಗತ್ಯ. ಇದು ಶಿಕ್ಷಕರ-ವಿದ್ಯಾರ್ಥಿಗಳ ಸಂವಹನ ಕೌಶಲ್ಯಗಳನ್ನು ಸುಧಾರಿಸಿ ಕಲಿಕಾ ಪ್ರಕ್ರಿಯೆ ಸರಳಗೊಳಿಸುತ್ತದೆ ಎಂದು ಹೇಳಿದರು.
ಬಿ ಆರ್ ಪಿ ಅಶೋಕ ರಾಠೋಡ ಮಾತನಾಡಿ, 1ನೇ ವರ್ಗದಿಂದಲೇ ವಿದ್ಯಾರ್ಥಿಗಳಿಗೆ ಸ್ಥಳೀಯ ಸಂಪನ್ಮೂಲ ಬಳಸಿ, ಮಾತೃಭಾಷೆ ಮತ್ತು ಇಂಗ್ಲಿಷ್ ಎರಡರಲ್ಲೂ ಶಿಕ್ಷಣ ನೀಡಿ, ಅವರ ಕಲಿಕೆಯನ್ನು ಬೆಂಬಲಿಸಿ, ಜಾಗತಿಕ ಸ್ಪರ್ಧೆಗೆ ಮಕ್ಕಳನ್ನು ಸಜ್ಜುಗೊಳಿಸುವದು ಈ ದ್ವಿಭಾಷಾ ಮಾಧ್ಯಮದ ಗುರಿಯಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಸಂತೋಷ ಬಂಡೆ ಮಾತನಾಡಿ, ದ್ವಿಭಾಷಾ ಮಾಧ್ಯಮವು ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿ, ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕುತ್ತದೆ. ಅದು ಮಾತೃ ಭಾಷೆಯ ಅಡಿಪಾಯದೊಂದಿಗೆ ಜಾಗತಿಕ ಜ್ಞಾನವನ್ನು ಪಡೆಯಲು ಒಂದು ಸಮತೋಲಿತ ಮಾರ್ಗವಾಗಿದೆ ಎಂದು ಹೇಳಿದರು.
ಬಿ ಆರ್ ಪಿ ಗಳಾದ ಆಂಜನೇಯ ಸ್ವಾಮಿ ಹೊಸಮನಿ, ರಂಗರಾವ ಕುಲಕರ್ಣಿ, ಸಿ ಆರ್ ಪಿ ಗಳಾದ ಸಂಜೀವ ಬೋರಗಿ, ಬಿ. ಡಿ. ಚಪ್ಪರಬಂದ, ಭಾಷಾಸಾಬ ಕುಮಸಗಿ, ತಾಲೂಕ ಸಂಪನ್ಮೂಲ ವ್ಯಕ್ತಿಗಳಾಗಿ ಆರ್. ಎಲ್. ಹಜೇರಿ, ದಾದಾ ಶ್ಯಾಮನವರ, ಎಸ್.ಎ. ಮೊಮಿನ್, ಆರ್.ಎಸ್. ಸುರಗಿಹಳ್ಳಿ, ಜಟ್ಟಪ್ಪ ಮಾದರ, ಶಿವಾನಂದ ಡಬ್ಬಿಗಾರ, ಎಚ್.ಆರ್. ಪೂಜಾರಿ, ರಾಹುಲ್ ಭೀಮನಗರ, ಸಂಜೀವ ಗುಡಿಮನಿ, ಕವಿತಾ, ಕೆಂಪರಾಜು, ರಮೇಶ ಸೇರಿದಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳು ಹಾಗೂ 1-5 ನೇ ವರ್ಗ ಬೋಧಿಸುವ 400ಕ್ಕೂ ಅಧಿಕ ಶಿಕ್ಷಕರು ಭಾಗವಹಿಸಿದ್ದರು.

Share this