ಕಾಂಗ್ರೆಸ್ ದಿವಾಳಿತನಕ್ಕೆ ಬಿಜೆಪಿಯಿಂದ ವಿಶೇಷ ಕರಪತ್ರ ವಿತರಣೆಗೆ ಚಾಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 14 :
ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪೂರೈಸಿದ ಸಾವಿರ ದಿನವನ್ನು ವೈಫಲ್ಯ ಹಾಗೂ ಹಗರಣಗಳಿಂದಲೇ ಪೂರ್ಣಗೊಳಿಸಿದ್ದು ಸರ್ಕಾರದ ವೈಫಲ್ಯ ಪ್ರತಿಬಿಂಬಿಸಲು ಬಿಜೆಪಿ ವಿಶೇಷವಾದ ಕರಪತ್ರ ರಚಿಸಿದ್ದು, ಈ ಫೋಸ್ಟರ್‌ಗಳನ್ನು ಶಿವಾಜಿ ವೃತ್ತದಲ್ಲಿ ಸರ್ಕಾರಿ ಬಸ್ಸುಗಳಿಗೆ ಅಂಟಿಸುವ ಅಭಿಯಾನ ನಡೆಯಿತು.
ಈ ಅಭಿಯಾನಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ರಾಜ್ಯ ಸರ್ಕಾರ ಹಗರಣದಲ್ಲಿಯೇ ಕಾಲಹರಣ ಮಾಡುತ್ತಿದೆ, ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡುತ್ತಿಲ್ಲ, ಅನೇಕ ಯೋಜನೆಗಳ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿ ಸರ್ಕಾರದ ಬೊಕ್ಕಸವನ್ನೇ ಬರಿದು ಮಾಡಿ, ಕೇವಲ ಎರಡು ವರ್ಷಗಳಲ್ಲಿ 2 ಲಕ್ಷ ಕೋಟಿಗೂ ಅಧಿಕ ಸಾಲದ ಹೊರೆ ಹೊರೆಸಿ ಕರ್ನಾ ಟಕವನ್ನು ಆರ್ಥಿಕ ದಿವಾಳಿಯತ್ತ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸಂಬಳ ನೀಡಲು ಹಣದ ಕೊರತೆ ಉಂಟಾಗಿದೆ. ಶಾಲೆಗಳನ್ನೇ ಮುಚ್ಚುವ ಪರಿಸ್ಥಿತಿ ನಿರ್ಮಾ ಣವಾಗಿದೆ. ಅನುದಾನದ ಕೊರತೆಯಿದೆ ಎಂದು ಕಾಂಗ್ರೆಸ್ ಶಾಸಕರೇ ಸಾರ್ವ ಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಈ ಸರ್ಕಾರದ ಅವ್ಯವಸ್ಥೆಗೆ ಹಿಡಿದ ಕನ್ನಡಿ ಎಂದರು.
ಅನ್ನಭಾಗ್ಯದ ಅಕ್ಕಿ ಕಾಳಸಂತೆ ಪಾಲಾಗುತ್ತಿದೆ. ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿ ಬಡವರಿಗೂ ತೊಂದರೆ ನೀಡುವ ಕೆಟ್ಟ ವ್ಯವಸ್ಥೆಗೆ ಕಾಂಗ್ರೆಸ್ ಮುಂದಾಗಿದೆ. ಹಿಂದೂ ವಿರೋಧಿ ನಡೆ ಮತ್ತು ಮುಸ್ಲಿಂ ಓಲೈಕೆ ನಿತ್ಯ ನಡೆಯುತ್ತಿದೆ. ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡುವ ಮೂಲಕ, ಹಿಂದೂಗಳ ಹಿತಾಸಕ್ತಿಗಳನ್ನು ಬಲಿ ಕೊಟ್ಟಿದೆ ಎಂದರು.
ಬಿಜೆಪಿ ನಗರ ಮಂಡಳ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ,:ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರನ್ನು ರಕ್ಷಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ಸರ್ಕಾರ ತೊಡಗಿರುವುದು ನಾಚಿಕಗೇಡು, ಎಷ್ಟೇ ಛೀಮಾರಿ ಹಾಕಿಸಿಕೊಂಡರೂ ಕಾಂಗ್ರೆಸ್ ತನ್ನ ತುಷ್ಟೀಕರಣ ರಾಜಕಾರಣ ಬಿಟ್ಟಿಲ್ಲ, ಬಜೆಟ್‌ನಲ್ಲಿ ಉರ್ದು ಶಾಲೆಗಳಿಗೆ 100 ಕೋಟಿ ರೂ. ವಿಶೇಷ ಅನುದಾನ ನೀಡಿದೆ. ಕನ್ನಡ ಶಾಲೆಗಳನ್ನು ಮುಚ್ಚುತ್ತಿದೆ ಎಂದರು.
ಚಿನ್ನು ಚಿನಗುಂಡಿ, ವಿಜಯ ಜೋಶಿ, ಗಣೇಶ ರಣದೇವಿ, ವಿಕಾಸ ಪದಕಿ ಆನಂದ ಮುಚ್ಚಂಡಿ, ವಿವೇಕ ತಾವರಗೇರಿ, ಸಂಜೀವ ಬಡಿಗೇರ, ಸತೀಶ, ಗೇಸುದರಾಜ್ ಇನಾಮದಾರ, ಗಣೇಶ ಉಪ್ಪಾರ, ಸತೀಶ ಗಾಯಕವಾಡ ಮುಂತಾದವರು ಪಾಲ್ಗೊಂಡಿದ್ದರು.

Share this