ಸಪ್ತ ಸಾಗರ ವಾರ್ತೆ ವಿಜಯಪುರ, ಅ. 3:
ಬಿಜೆಪಿಯವರು ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆಯಲು ಬಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಮ್.ಬಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಭೀಮಾನದಿ ಪ್ರವಾಹ ಸಂಬಂಧ ಬಿಜೆಪಿ ನಿಯೋಗ ವೀಕ್ಷಣೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಅವರು ಮೇಲಿನಂತೆ ಟಾಂಗ್ ನೀಡಿದರು.
ಪ್ರವಾಹ ಕುರಿತು ಸಿಎಂ ಹಾಗೂ ನಾವು ವೈಮಾನಿಕ ಸಮೀಕ್ಷೆ ಮಾಡಿದ ಬಳಿಕ ತುರ್ತಾಗಿ ಹೆಕ್ಟೇರ್ ಗೆ 17000 ರೂಪಾಯಿ ಪರಿಹಾರ ಘೋಷಣೆ ಮಾಡಿದ್ದೇವೆ. ಕೇಂದ್ರದ 14 ನೇ ಹಣಕಾಸು ಆಯೋಗದ
60 ರಿದ 70 ಸಾವಿರ ಕೋಟಿ ರೂಪಾಯಿ ನಮ್ಮ ರಾಜ್ಯಕ್ಕೆ ಬರಬೇಕಿತ್ತು. ಅದು ಇನ್ನೂ ಬಂದಿಲ್ಲ. ನಿಜಕ್ಕೂ ಕೇಂದ್ರದಿಂದ ನಮ್ಮ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ನುಡಿದರು.
ಬಿಜೆಪಿ ನಿಯೋಗದವರು ಪ್ರವಾಹ ತಗ್ಗಿದ ಮೇಲೆ ಬರುತ್ತಿದ್ದಾರೆ. ಈಗ ಬಂದು ಏನು ಮಾಡುತ್ತಾರೆ. ನಾವು ವೀಕ್ಷಣೆ ಮಾಡಿ ಪರಿಹಾರ ಕೊಡುತ್ತಿದ್ದೇವೆ.
ಈಗ ಬಿಜೆಪಿಯವರು ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆಸುತ್ತಿದ್ದಾರೆಂದು ನಗೆ ಚಟಾಕಿ ಹಾರಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ 5800 ಕೋಟಿ ರೂಪಾಯಿ ಕೇಂದ್ರದ ಕ್ಯಾಬಿನೆಟ್ ನಲ್ಲಿ ಘೋಷಣೆ ಮಾಡಿದ್ದು, ಒಂದು ರೂಪಾಯಿ ಬಂದಿಲ್ಲ. ಮೊದಲು ಬಿಜೆಪಿಯವರು ಆ ಕೆಲಸ ಮಾಡಿಸಲಿ ಎಂದು ಹೇಳಿದರು.
ಎನ್ ಡಿ ಆರ್ ಎಪ್ ನಾರ್ಮ್ಸ್ ರಿವೈಸ್ ಮಾಡಲು ಹೇಳಲಿ. 8500 ರೂ. ಗಳಿಂದ 20,000 ರೂ. ಮಾಡಿಸಲಿ. ದೆಹಲಿಗೆ ಹೋಗಿ ಕೇಳಲಿ ಎಂದರು.
ರಾಜ್ಯದ ಬಿಜೆಪಿಯವರಿಗೆ ದೆಹಲಿಗೆ ಹೋಗುವ ತಾಕತ್ತು ಇಲ್ಲ, ಧೈರ್ಯವೂ ಇಲ್ಲ. ದೆಹಲಿಗೆ ಹೋದರೆ ಬೈಯ್ಯುತ್ತಾರೆ ಎಂಬ ಭಯವಿದೆ. ಇಲ್ಲೇ ಸುಮ್ಮನೇ ಸುತ್ತಾಡುತ್ತಾರೆ ಎಂದು ಛೇಡಿಸಿದರು.
ರಾಜ್ಯ ಬಿಜೆಪಿಯಲ್ಲಿ ಹಲವಾರು ಟೀಂ ಇವೆ. ವಿಜಯೇಂದ್ರ, ಆರ್. ಅಶೋಕ ಸೇರಿದಂತೆ ಅನೇಕ ಟೀಂ ಇವೆ.
ಜೋಶಿ, ಸೋಮಣ್ಣ ಟೀಂ ಇವೆ. ಇಪ್ಪತ್ತು ಟೀಂ ಇವೆ. ಬಿಜೆಪಿಯಲ್ಲಿ ಬಾಗಿಲು ಒಂದಿಲ್ಲ. ನೂರು ಇವೆ ಎಂದು ಟೀಕಿಸಿದರು.
ಬಿಜೆಪಿಯವರು ಟ್ರೈನ್ ಹೋದ ಮೇಲೆ ಟಿಕೆಟ್ ತಗೆಯಲು ಬಂದಿದ್ದಾರೆ- ಸಚಿವ ಎಂ.ಬಿ. ಪಾಟೀಲ ವ್ಯಂಗ್ಯ


