ಸಪ್ತಸಾಗರ ವಾರ್ತೆ ವಿಜಯಪುರ, ಸೆ. 24: ವಿಜಯಪುರ ನಗರದಲ್ಲಿ ರಸ್ತೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿ ವಿಷಯದಲ್ಲಿ ಬೇಜವಾಬ್ದಾರಿತನ
ಪ್ರದರ್ಶಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಅಥಣಿ ರಸ್ತೆ ತಡೆ ನಡೆಸಿ ಗುಂಡಿಗಳಲ್ಲಿ ಸಸಿಗಳನ್ನು ನೆಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದ ಮುಂಭಾಗದಲ್ಲಿ ಅಥಣಿ ರಸ್ತೆಗೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ – ಜೀವಕ್ಕೆ ಸಂಚಾರ’, ಗುಂಡಿ ಮುಚ್ಚದೇ ರಾಜ್ಯದ ಜನತೆ ಹಾಳು ಮಾಡಿದ ಸರ್ಕಾರಕ್ಕೆ ಧಿಕ್ಕಾರ',
ಗುಂಡಿಗಳ ಜನಕ ಡಿ.ಕೆ. ಶಿವಕುಮಾರ’ ಎಂಬಿತ್ಯಾದಿ ಪ್ಲೇಕಾರ್ಡ್ಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ರಾಜ್ಯ ಸರ್ಕಾರ ಒಂದೇ ಒಂದು ಸುಸಜ್ಜಿತ ರಸ್ತೆ ನಿರ್ಮಿಸಿಲ್ಲ. ರಸ್ತೆಗಳ ಅವ್ಯವಸ್ಥೆ ಖಂಡಿಸಿ ಅನೇಕ ಉದ್ಯಮಿಗಳು ರಾಜ್ಯ ಬಿಟ್ಟು ಹೋಗುತ್ತೇವೆ ಎಂದು ಹೇಳಿದರೆ ನಮ್ಮ ಉಪಮುಖ್ಯಮಂತ್ರಿಗಳು ಇದನ್ನು ಬ್ಲಾಕ್ ಮೇಲ್ ಎಂದು ಕರೆದರು. ರಸ್ತೆ ನಿರ್ಮಿಸಿಕೊಡಿ ಎಂದು ಹೇಳುವುದು ಬ್ಲಾಕ್ ಮೇಲ್ ಎಂದಾದರೇ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಈ ನೀತಿಯಿಂದಾಗಿಯೇ ಅನೇಕ ಕಂಪನಿಗಳು ನಮ್ಮ ರಾಜ್ಯ ಬಿಟ್ಟು ಹೋಗುತ್ತಿವೆ. ಇದರಿಂದ ನಮ್ಮ ಉದ್ಯೋಗಗಳಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಗುಂಡಿಗಳನ್ನು ಮುಚ್ಚಿ ಸುಸಜ್ಜಿತ ರಸ್ತೆ ಮಾಡಬೇಕಾದ ಸರ್ಕಾರ ಆ ವಿಷಯದಲ್ಲಿಯೂ ದರ್ಪ ತೋರಿ ಬಿಟ್ಟು ಹೋಗುವುದಾದರೆ ಬಿಟ್ಟು ಹೋಗಿ ಎಂದು ಉದ್ಯಮ ಸಂಸ್ಥೆಗಳಿಗೆ ಹೇಳುವ ಮೂಲಕ ಬೇಜವಾಬ್ದಾರಿ ಪ್ರದರ್ಶಿಸಿದೆ. ಇದೊಂದು ನಿರ್ಲಜ್ಜ ಸರ್ಕಾರ, ರಸ್ತೆ ಕೇಳಿದರೆ ಬ್ಲಾಕ್ ಮೇಲ್ ಎಂದು ಹೇಳುವ ಕೆಟ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದಲ್ಲಂತೂ ರಸ್ತೆಗಳು ಹಾಳಾಗಿ ಹೋಗಿವೆ. ಗುಂಡಿಗಳನ್ನು ಮುಚ್ಚುವ ಕನಿಷ್ಠ ಕಾರ್ಯವನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ. ಈ ಎಲ್ಲ ರಸ್ತೆಗಳು ನಿತ್ಯ ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎಂದು ಅಸಮಾಧಾನ ಹೊರಹಾಕಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಕೇವಲ ಗ್ಯಾರಂಟಿ ಎಂದು ಹೇಳಿ ಅಭಿವೃದ್ಧಿಗೆ ಒಂದೇ ಒಂದು ರೂ. ಅನುದಾನವನ್ನು ಈ ರಾಜ್ಯ ಸರ್ಕಾರ ನೀಡಿಲ್ಲ. ಕರ್ನಾಟಕದ ರಸ್ತೆಗಳು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸರ್ವನಾಶವಾಗಿವೆ. ರಾಜ್ಯದ ಘನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು.
ಕೂಡಲೇ ರಾಜ್ಯ ಸರ್ಕಾರ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದರು.
ಪಾಲಿಕೆ ಸದಸ್ಯ ರಾಹುಲ್ ಜಾಧವ ಮಾತನಾಡಿದರು.
ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಗೋಪಾಲ ಘಟಕಾಂಬಳೆ, ಚಿದಾನಂದ ಛಲವಾದಿ, ಮಳುಗೌಡ ಪಾಟೀಲ, ನಗರ ಬಿಜೆಪಿ ಅಧ್ಯಕ್ಷ ಸಂದೀಪ ಪಾಟೀಲ ಮಲ್ಲಿಕಾರ್ಜುನ ಜೋಗೂರ, ಎಸ್.ಎ. ಪಾಟೀಲ, ಡಾ. ಸುರೇಶ ಬಿರಾದಾರ, ಉಮೇಶ ಕೋಳಕೂರ,
ಬಸವರಾಜ ಬೈಚಬಾಳ, ರಾಜೇಶ ತಾವಸೆ, ಭೀಮಾಶಂಕರ ಹದನೂರ, ರಾಹುಲ್ ಜಾಧವ, ಭೀಮಸಿಂಗ್ ರಾಠೋಡ, ಬಾಲರಾಜ್ ರೆಡ್ಡಿ, ರಾಘವೇಂದ್ರ ಕಾಪಸೆ, ಸಚಿನ್ ಬೊಂಬಳೆ, ಶ್ರೀಕಾಂತ ಶಿಂಧೆ, ರವಿಕಾಂತ ಬಗಲಿ, ರಾಜು ಬಿರಾದಾರ, ಪಾಪುಸಿಂಗ್ ರಾಜಪೂತ, ಚಿನ್ನು ಚಿನಗುಂಡಿ, ರಾಮಚಂದ್ರ ಚವ್ಹಾಣ, ಬಸವರಾಜ್ ಹಳ್ಳಿ, ಆನಂದ ಮುಚ್ಚಂಡಿ, ಅಪ್ಪು ಕುಂಬಾರ, ಪ್ರಮೋದ ಬಡಿಗೇರ, ಸಂತೋಷ ನಿಂಬರಗಿ, ಜಗದೀಶ ಮುಚ್ಚಂಡಿ, ರಾಜೇಂದ್ರ ವಾಲಿ, ವಿನಾಯಕ ದಹಿಂಡೆ, ವಿಜಯ ಜೋಶಿ, ರವಿ ಬಿರಾದಾರ, ಭೀಮು ಸಾರವಾಡ, ಸ್ವಪ್ನಾ ಕಣಮುಚನಾಳ, ಮಲ್ಲಮ್ಮ ಜೋಗೂರ, ಗೀತಾ ಚೌಧರಿ, ಸುಷ್ಮಿತಾ ವಾಡಕರ, ರಾಜೇಶ್ವರಿ ಅವಟಿ, ಸಂಪತ ಕೋವಳ್ಳಿ, ಶಿವಾನಂದ ಮಖಣಾಪೂರ ಪಾಲ್ಗೊಂಡಿದ್ದರು.
ವಿಜಯಪುರದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
