ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 21 :
ಎಐ ಶೃಂಗಸಭೆಗೆ ಅಸಂಬದ್ಧವಾಗಿ ಅಡ್ಡಿಪಡಿಸಿದ ಕಾಂಗ್ರೆಸ್ ನಡೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ವಿಫಲ ಯತ್ನ ಮಾಡಿದರು.
ನೂರಾರು ಸಂಖ್ಯೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರನ್ನು ಕೋರ್ಟ್ ಸರ್ಕಲ್ ಬಳಿಯೇ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು. ಆಗ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್ ನುಗ್ಗಿ ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಅಣಿಯಾಗುತ್ತಿದ್ದಂತೆ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಕೆಲಕಾಲ ತಮ್ಮ ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ಪ್ರತಿಭಟನೆ ವೇಳೆ ಆಕ್ರೋಶ ಹೊರಹಾಕಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಕಾಪಸೆ, ಕಾಂಗ್ರೆಸ್ ಒಂದು ರೀತಿ ಕ್ಯಾನ್ಸರ್ ಇದ್ದಂತೆ. ಕೃತಕ ಬುದ್ಧಿಮತ್ತೆಯಲ್ಲಿ ಭಾರತ ಸಾರ್ವಭೌಮತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಶೃಂಗಸಭೆಗೆ ಅಡ್ಡಿಪಡಿಸಿರುವ ಕಾಂಗ್ರೆಸ್ ನಡೆ ಖಂಡನಾರ್ಹ. ಅದು ಅಸಂಬದ್ಧ ರೀತಿಯಲ್ಲಿ ಅಡ್ಡಿಪಡಿಸಿರುವುದು ಖಂಡನಾರ್ಹ. ಇದು ದೇಶಕ್ಕೆ ಮಾಡಿದ ಅವಮಾನ ಎಂದರು.
ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಇಂತಹ ಘಟನೆಗಳು ನಡೆಯುವುದು ಖಂಡನೀಯ.
ಕಾಂಗ್ರೆಸ್ ದೇಶಕ್ಕೆ ನಿಷ್ಠೆ ತೋರಿಸುವುದು ನಿಜವೇ ಆಗಿದ್ದಿದ್ದರೆ ಇಂದು ಜಾಗತಿಕ ಅತಿಥಿಗಳ ಮುಂದೆ ಜಾಗತಿಕ ಎಐ ಸಮ್ಮೇಳನದಲ್ಲಿ ಅರೆಬೆತ್ತಲೆ ಕುಣಿಯುತ್ತಿರಲಿಲ್ಲ. ರಾಜಕೀಯ ವಿರೋಧಕ್ಕಾಗಿ ಇಂತಹ ಕೃತ್ಯ ನಡೆಸಿದವರಿಗೆ ಸಾರ್ವಜನಿಕರೇ ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ. ಸೋನಿಯಾ ಗಾಂಧಿಗೆ ಜ್ವರ ಬಂದರೆ ಉರುಳುಸೇವೆ ಮಾಡುವ ಕಾಂಗ್ರೆಸ್ಸಿಗರು, ಭಾರತ ಮಾತೆಗೆ ಮಾತ್ರ ನಿತ್ಯನಿರಂತರ ಅವಮಾನ ಮಾಡುತ್ತಿರುತ್ತಾರೆ ಎಂದು ತೀವ್ರ ಅಸಮಾಧಾನ ಹೊರಹಾಕಿದರು.
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರ ಈ ನಡೆ ರಾಷ್ಟ್ರ ದ್ರೋಹಕ್ಕೆ ಸಮಾನವಾಗಿದೆ. ರಾಷ್ಟ್ರದ ಘನತೆಯನ್ನು ಹಾಳು ಮಾಡುವ ದುಷ್ಟ ಬುದ್ಧಿ ಹೊಂದಿರುವ ಕಾಂಗ್ರೆಸ್ ನಾಯಕರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಭಾರತ ಮಾನ ಹರಾಜು ಹಾಕುವ ಪ್ರಯತ್ನ ಮಾಡುವ ಮೂಲಕ ಭಾರತದ ಸಾಂಸ್ಕೃತಿಕತೆ ಹಾಗೂ ತಾಂತ್ರಿಕತೆಯನ್ನೂ ಸಹ ಅಪಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಕಲಿ ಗಾಂಧಿ ಮನೆತನಕ್ಕೆ ಮೆಚ್ಚಿಸಲಿಕ್ಕೆ ಈ ಕಾಂಗ್ರೆಸ್ ಕಾರ್ಯಕರ್ತರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎನ್ನಲು ಇದು ಮತ್ತೊಂದು ನಿದರ್ಶನ. ಕಾಂಗ್ರೆಸ್ ಕಾರ್ಯಕರ್ತರ ಅರೆ ಬೆತ್ತಲೆ ಕುಣಿಯುವುದನ್ನು ಕಂಡು ಸಾರ್ವಜನಿಕರೇ ದಂಡಿಸಿ ಬುದ್ಧಿ ಕಲಿಸಿದ್ದಾರೆ. ಆದ್ದರಿಂದ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದೆ ಹೋದರೆ ಕಾಂಗ್ರೆಸ್ ಪಕ್ಷ ಇಡೀ ರಾಷ್ಟ್ರದಿಂದಲೇ ಅಳಿದು ಹೋಗುವ ಸಮಯ ಇನ್ನೂ ದೂರ ಇಲ್ಲ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಈರಣ್ಣ ರಾವೂರ, ಮಹೇಂದ್ರ ನಾಯಕ, ವಿಜಯಕುಮಾರ ಕುಡಿಗನೂರು, ಭೀಮಾಶಂಕರ ಹದನೂರು, ರಮೇಶ ಬಿದನೂರ, ರಾಜು ಬಿರಾದಾರ, ರವಿಕಾಂತ ಬಗಲಿ, ನಗರ ಮಂಡಲ ಅಧ್ಯಕ್ಷ ಸಂದೀಪ ಪಾಟೀಲ, ವಿಜಯ ಜೋಶಿ, ಕೃಷ್ಣ ಗುನ್ಹಾಳಕರ, ರಾಜೇಶ ತಾವಸೆ, ಚಿನ್ನು ಚಿನಗುಂಡಿ, ಅಶೋಕ ರಾಠೋಡ ನೇಬಗೇರಿ, ಭೀಮಸಿಂಗ್ ರಾಥೋಡ, ಸಚಿನ್ ಬೊಂಬಳೆ, ಭರತ ಕೋಳಿ, ಭರತ ಕುಲಕರ್ಣಿ, ಚೇತನ ಸಂಗಮ, ರಾಜಕುಮಾರ ಸಗಾಯಿ, ಭಾರತಿ ಭುಯ್ಯಾರ, ವಿಕಾಸ ಪದಕಿ, ಬಸಮ್ಮ ಗುಜರಿ, ಜಯಶ್ರೀ ಅಫಜಲಪುರ, ಮಂಥನ ಗಾಯಕವಾಡ, ಅನಿಲ್ ಉಪ್ಪಾರ, ಸಂಗಮೇಶ ಉಕ್ಕಲಿ, ಶೇಖರ ಬಾಗಲಕೋಟ, ರಾಜಶೇಖರ ಬಾಗಲಕೋಟ, ಸ್ವರೂಪ ಸಪ್ತಾಳೆ, ವಿನೋದ ಪತ್ತಾರ, ಶಿವರಾಜ್ ಮಡಿವಾಳರ, ವಿವೇಕ ತಾವರಗೇರಿ, ಮಯೂರ ಮಾರ್ಗಾಂವ್ಕರ್, ಸಾಗರ್ ಶೇರಖಾನೆ, ಸಂತೋಷ ಜಾಧವ ಪಾಲ್ಗೊಂಡಿದ್ದರು.

Share this