ಆಕಾಂಕ್ಷಿಗಳಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಎಂ.ಬಿ. ಪಾಟೀಲರನ್ನು ದೂಷಿಸುವುದು ಸರಿಯಲ್ಲ: ಡಾ. ಗಂಗಾಧರ ಸಂಬಣ್ಣಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 4:
ನೂತನ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಸಚಿವ ಎಂ.ಬಿ. ಪಾಟೀಲರನ್ನು ಹೊಣೆಗಾರರನ್ನಾಗಿ ಮಾಡುವುದು ಸಂಪೂರ್ಣ ಅಸಮರ್ಥನೀಯ ಎಂದು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ತಿಳಿಸಿದ್ದಾರೆ.
ಜಿಲ್ಲೆಯ ಕಾಂಗ್ರೆಸ್‌ನ ಆರೂ ಶಾಸಕರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದು, ಈ ಬಾರಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಇತ್ತು. ಈ ಸಂಬಂಧ ಎಂ.ಬಿ. ಪಾಟೀಲರೂ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯವರಿಗೆ ಉತ್ತಮ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಸಚಿವ ಸ್ಥಾನ ಸಿಗದಿದ್ದಕ್ಕೆ ಎಂ.ಬಿ. ಪಾಟೀಲರನ್ನೇ ಕಾರಣವೆಂದು ಆರೋಪಿಸುವುದು ಸರಿಯಲ್ಲ. ಸಚಿವ ಸ್ಥಾನ ಸಿಕ್ಕಿದ್ದರೆ “ಎಂ.ಬಿ. ಪಾಟೀಲರ ಪ್ರಯತ್ನದಿಂದಲೇ ಸಚಿವರಾದೆವು” ಎಂದು ಹೇಳುತ್ತಿದ್ದರೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು. ಸ್ಥಾನ ಸಿಗದಾಗ ಮಾತ್ರ ಅವರನ್ನು ದೂಷಿಸುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಎಂ.ಬಿ. ಪಾಟೀಲರು ಪಕ್ಷ ಸಂಘಟನೆಯಲ್ಲಿ ತನು-ಮನ-ಧನದಿಂದ ಸೇವೆ ಸಲ್ಲಿಸಿದ್ದು, 2004ರಲ್ಲಿ ಧರ್ಮಸಿಂಗ್ ನೇತೃತ್ವದ ಸರ್ಕಾರ ಹಾಗೂ 2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ತಪ್ಪಿದ್ದರೂ ಯಾರನ್ನೂ ದೂಷಿಸದೆ ತಾಳ್ಮೆಯಿಂದ ಕಾಯ್ದಿದ್ದರು. ಈ ವಾಸ್ತವವನ್ನು ಅರಿತು ನಾಯಕರು ಜವಾಬ್ದಾರಿಯಿಂದ ಮಾತನಾಡಬೇಕು. ಯಾವುದೇ ಆಧಾರವಿಲ್ಲದೆ ಆರೋಪ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಡಾ. ಸಂಬಣ್ಣಿ ಹೇಳಿದ್ದಾರೆ.

Share this