ಬಿ.ಎಲ್.ಡಿ ಸೌಹಾರ್ದ ಸಹಕಾರಿ ಸಂಘಕ್ಕೆ ₹7.17 ಕೋಟಿ ನಿವ್ವಳ ಲಾಭ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ.25: ಶಿಸ್ತುಬದ್ಧ ಆರ್ಥಿಕ ಕ್ರಮಗಳಿಂದಾಗಿ ಬಿಜಾಪುರ ಲಿಂಗಾಯತ ಡೆವಲಪ್‌ಮೆಂಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ (ಬಿ.ಎಲ್.ಡಿ ಸೌಹಾರ್ದ) ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಬಿ.ಎಲ್.ಡಿ ಸೌಹಾರ್ದದ 4ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, 2025-26ನೇ ಆರ್ಥಿಕ ವರ್ಷದಲ್ಲಿ ಸಂಘ ಗಮನಾರ್ಹ ಆರ್ಥಿಕ ಸಾಧನೆ ಮಾಡಿದೆ. ಸಂಘದ ಒಟ್ಟು ವ್ಯವಹಾರ ₹760 ಕೋಟಿ ತಲುಪಿದ್ದು, ₹7.17 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಘದ ಸದೃಢ ಆರ್ಥಿಕ ಸ್ಥಿತಿಗೆ ಇದು ಸಾಕ್ಷಿಯಾಗಿದ್ದು, ಸದಸ್ಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಶೇ.5ರಷ್ಟು ಲಾಭಾಂಶ ನೀಡಲಾಗುತ್ತಿದೆ. ಸಂಘದ ಈ ಸಾಧನೆಗೆ ಗ್ರಾಹಕರು, ಸದಸ್ಯರು, ನಿರ್ದೇಶಕರು ಹಾಗೂ ಸಿಬ್ಬಂದಿಯ ಸಹಕಾರ ಪ್ರಮುಖ ಕಾರಣವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಸದಸ್ಯರಿಗೆ ಇನ್ನಷ್ಟು ಉತ್ತಮ ಸಹಕಾರಿ ಸೇವೆಗಳನ್ನು ಒದಗಿಸುವುದು, ಠೇವಣಿ ಹಾಗೂ ಸಾಲ ವ್ಯವಹಾರಗಳನ್ನು ವಿಸ್ತರಿಸುವುದು ಮತ್ತು ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಗುರಿ ಹೊಂದಲಾಗಿದೆ ಎಂದು ಸುನೀಲಗೌಡ ಪಾಟೀಲ ಹೇಳಿದರು.

ಸಂಸ್ಥೆಯ ಬೆಳವಣಿಗೆಗೆ ಅಪಾರ ಕೊಡುಗೆ

ಸಾನಿಧ್ಯ ವಹಿಸಿದ್ದ ಷಣ್ಮುಖಾರೂಢ ಮಠದ ಪೀಠಾಧ್ಯಕ್ಷ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಮಾತನಾಡಿ, ವಚನಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ಸ್ಥಾಪಿಸಿದ ಬಿ.ಎಲ್.ಡಿ.ಇ ಸಂಸ್ಥೆಯನ್ನು ಸಂಗನಬಸವ ಸ್ವಾಮೀಜಿ, ಬಂಗಾರಮ್ಮ ಸಜ್ಜನ ಹಾಗೂ ಬಿ.ಎಂ. ಪಾಟೀಲ ಅವರು ಕಟ್ಟಿ ಬೆಳೆಸಿದ್ದಾರೆ. ಇದೀಗ ಎಂ.ಬಿ. ಪಾಟೀಲ ಅವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಶತಮಾನದ ಹಿಂದೆ ಆರಂಭವಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಉತ್ತರ ಕರ್ನಾಟಕದ ಶೈಕ್ಷಣಿಕ, ಆರೋಗ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶರಣಬಸಪ್ಪ ಡಿ. ಗುಡ್ಡೊಡಗಿ, ನಿರ್ದೇಶಕರಾದ ಶ್ರೀಕಾಂತ ಎಸ್. ಶಿರಾಡೋಣ, ಅವಿನಾಶ ಬಿ. ಜೈನ, ವಿಜಯಕುಮಾರ ಡಿ. ಕನಮಡಿ, ಗಿರೇಪ್ಪ ಡಿ. ಗುಗ್ಗರಿ, ಪ್ರಭುಗೌಡ ಬಸನಗೌಡ ಬಿರಾದಾರ, ಸಂತೋಷ ಬಸಲಿಂಗಪ್ಪ ಹೊಕ್ರಾಣಿ, ಸೋಮನಾಥ ಗೊಲಪ್ಪ ಕಳ್ಳಿಮನಿ, ಪ್ರೊ. ರಾಜು ಆಲಗೂರ, ಮಲ್ಲಪ್ಪ ಪಿ. ಕವಲಗಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ ಜತ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this