ಗ್ರಾಮೀಣರಿಗೆ ತಜ್ಞ ವೈದ್ಯರ ಸೇವೆ ಡಿಜಿಟಲ್ ಮೂಲಕ ಮನೆಬಾಗಿಲಿಗೆ
ಸಪ್ತಸಾಗರ ವಾರ್ತೆ,ವಿಜಯಪುರ, ಜು. 31:
ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ತಲುಪಿಸುವ ಮಹತ್ವಾಕಾಂಕ್ಷಿ ಹೆಜ್ಜೆಯಾಗಿ, ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯವು ಉಕ್ಕಲಿ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದಲ್ಲಿ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ ನೀಡಿದೆ.
ಕಾರ್ಯಕ್ರಮವನ್ನು ನವದೆಹಲಿಯ ಸೆಂಟರ್ ಫಾರ್ ಕ್ರಾನಿಕ್ ಡಿಸೀಸ್ ಕಂಟ್ರೋಲ್ (CCDC) ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಡಿ. ಪ್ರಭಾಕರನ್ ಉದ್ಘಾಟಿಸಿ ಮಾತನಾಡಿ, ದೂರದ ಹಾಗೂ ಹಿಂದುಳಿದ ಪ್ರದೇಶಗಳ ಜನರಿಗೆ ಸಮಾನ ಮತ್ತು ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವಲ್ಲಿ ಟೆಲಿಮೆಡಿಸಿನ್ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಸಿ. ಯಡವಣ್ಣವರ ಅತಿಥಿಗಳನ್ನು ಸ್ವಾಗತಿಸಿ ಯೋಜನೆಯ ಉದ್ದೇಶವನ್ನು ವಿವರಿಸಿದರು. ಸಹ ಪ್ರಾಧ್ಯಾಪಕಿ ಡಾ. ತನುಜಾ ಪಿ. ಪಟ್ಟಣಕರ ಅತಿಥಿಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ CCDC ಬ್ರಿಡ್ಜ್ ಸೆಂಟರ್ ಮುಖ್ಯಸ್ಥ ಡಾ. ಅರುಣ್ ಪಿ. ಜೋಸ್ ಅವರು ಡಿಜಿಸೇತು (DigiSetu) ಆ್ಯಪ್ನ ಪ್ರಾತ್ಯಕ್ಷಿಕೆ ನೀಡಿ, ಗ್ರಾಮೀಣ ಸಮುದಾಯ ಮತ್ತು ತಜ್ಞ ವೈದ್ಯರ ನಡುವೆ ತ್ವರಿತ ಸಂಪರ್ಕ ಕಲ್ಪಿಸುವಲ್ಲಿ ಈ ತಂತ್ರಜ್ಞಾನ ಹೇಗೆ ನೆರವಾಗಲಿದೆ ಎಂಬುದನ್ನು ವಿವರಿಸಿದರು.
ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಅರುಣ ಚಂ. ಇನಾಮದಾರ ಮಾತನಾಡಿ, ಗ್ರಾಮೀಣ ಜನತೆಗೆ ತಜ್ಞ ವೈದ್ಯರ ಸಲಹೆ ಸುಲಭವಾಗಿ ದೊರೆಯುವಂತೆ ಡಿಜಿಟಲ್ ಆರೋಗ್ಯ ಸೇವೆಗಳನ್ನು ಇನ್ನಷ್ಟು ಬಲಪಡಿಸಲು ವಿಶ್ವವಿದ್ಯಾಲಯ ಬದ್ಧವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಹಾಗೂ ಡೀನ್ ಡಾ. ತೇಜಸ್ವಿನಿ ವಲ್ಲಭ, ಹಿರಿಯ ಉಪಪ್ರಾಂಶುಪಾಲ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಉಪಪ್ರಾಂಶುಪಾಲ ಡಾ. ಆನಂದ ಅಂಬಲಿ, ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ನಿರ್ದೇಶಕ ಡಾ. ಎಂ.ಎಂ. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಡಾ. ಚಂದ್ರಿಕಾ ದೊಡ್ಡಿಹಾಳ ವಂದನಾರ್ಪಣೆ ಸಲ್ಲಿಸಿದರು.
ಗ್ರಾಮೀಣ ಪ್ರದೇಶದ ಜನತೆಗೆ ತಜ್ಞ ವೈದ್ಯರ ಸಲಹೆ ಮತ್ತು ಆರೋಗ್ಯ ಸೇವೆಯನ್ನು ತ್ವರಿತವಾಗಿ ತಲುಪಿಸುವ ಈ ಟೆಲಿಮೆಡಿಸಿನ್ ಯೋಜನೆ, ತಂತ್ರಜ್ಞಾನ ಆಧಾರಿತ ಸಮಾನ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಮಹತ್ವದ ಹೆಜ್ಜೆಯಾಗಿದೆ.


