ಮಸೀದಿಯಲ್ಲಿ ಬಿಎಲ್‌ಒ ಸಭೆ: ಕಾಂಗ್ರೆಸ್ ಮುಖಂಡರ ವಿರುದ್ಧ ಕ್ರಮಕ್ಕೆ ಯತ್ನಾಳ್ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಜು.12: ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಸಾಂವಿಧಾನಿಕ ಹುದ್ದೆಯಲ್ಲದ ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್ ಹೊರ್ತಿ ನೇತೃತ್ವದಲ್ಲಿ ನಗರದ ಬಬಲೇಶ್ವರ ನಾಕಾ ಸಮೀಪದ ಅಲಿಖಾನ್ ಮಸೀದಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಸಭೆ ನಡೆಸಲಾಗಿದೆ ಎಂದು ಆರೋಪಿಸಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸಂಬಂಧಪಟ್ಟವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಶನಿವಾರ ಸಂಜೆ ನಡೆದ ಈ ಸಭೆಯಲ್ಲಿ ವಾರ್ಡ್ 32, 33 ಮತ್ತು 34ರ ಬಿಎಲ್‌ಒಗಳನ್ನು ಭಾಗವಹಿಸಲು ಶಿಕ್ಷಣ ಇಲಾಖೆಯ ಸಿಬ್ಬಂದಿ ಹಾಗೂ ಬಿಎಲ್‌ಒ ಸೂಪರ್‌ವೈಸರ್ ರಿಯಾಜ್ ತಮದಡ್ಡಿ ಕರೆ ಮಾಡಿ ಒತ್ತಾಯಿಸಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
ಇದರಿಂದ ಮನೆ-ಮನೆಗೆ ತೆರಳಿ ಎಸ್‌ಐಆರ್ ಕಾರ್ಯ ನಡೆಸಬೇಕಿದ್ದ ಬಿಎಲ್‌ಒಗಳ ಕೆಲಸಕ್ಕೆ ಅಡ್ಡಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ರಿಯಾಜ್ ತಮದಡ್ಡಿ ಅವರನ್ನು ಕೂಡಲೇ ಬಿಎಲ್‌ಒ ಸೂಪರ್‌ವೈಸರ್ ಹುದ್ದೆಯಿಂದ ವಜಾಗೊಳಿಸಬೇಕು. ಕಾನೂನುಬಾಹಿರ ಸಭೆ ನಡೆಸಿದ ಅಬ್ದುಲ್ ರಜಾಕ್ ಹೊರ್ತಿ ವಿರುದ್ಧ ಚುನಾವಣಾ ಅಧಿಕಾರಿಗಳು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಗರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾದಾಗಿನಿಂದ ಕಾಂಗ್ರೆಸ್ ಮುಖಂಡರು ವಿವಿಧ ರೀತಿಯಲ್ಲಿ ಅಡ್ಡಿಪಡಿಸುತ್ತಿದ್ದು, ಹಿಂದೂ ಪ್ರದೇಶಗಳಲ್ಲಿ ಬಿಎಲ್‌ಒಗಳ ಕಾರ್ಯಕ್ಕೆ ತೊಂದರೆ ನೀಡುವುದು ಹಾಗೂ ಮುಸ್ಲಿಂ ಪ್ರದೇಶಗಳಲ್ಲಿ ಮಸೀದಿಗಳಲ್ಲಿ ಸಭೆ ನಡೆಸಿ ಗುಂಪು ಗುಂಪಾಗಿ ಎಸ್‌ಐಆರ್ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ ಎಂದು ಯತ್ನಾಳ್ ಹೇಳಿದ್ದಾರೆ.
ಶನಿವಾರ ಅಲಿಖಾನ್ ಮಸೀದಿಯಲ್ಲಿ ನಡೆದ ಸಭೆಯನ್ನು ಬಿಜೆಪಿ ಬಿಎಲ್‌ಒ-2 ತಂಡದ ಸದಸ್ಯರು ವೀಕ್ಷಣೆ ನಡೆಸಿದ್ದು, ಅಬ್ದುಲ್ ರಜಾಕ್ ಹೊರ್ತಿ ಹಾಗೂ ಬಿಎಲ್‌ಒ ಸೂಪರ್‌ವೈಸರ್ ರಿಯಾಜ್ ತಮದಡ್ಡಿ ನೇತೃತ್ವದಲ್ಲಿ ಎಸ್‌ಐಆರ್ ಸಂಬಂಧಿತ ಸಭೆ ನಡೆದಿರುವ ದೃಶ್ಯಗಳನ್ನು ವಿಡಿಯೋದಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ವಿಡಿಯೋವನ್ನು ಆಧಾರವನ್ನಾಗಿ ಮಾಡಿಕೊಂಡು ಇಬ್ಬರ ವಿರುದ್ಧವೂ ಚುನಾವಣಾ ಆಯೋಗ ಮತ್ತು ಜಿಲ್ಲಾ ಆಡಳಿತ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

ತನಿಖೆಗೆ ಸಿದ್

ನಾನು ಕಾನೂನು ಬಾಹಿರವಾಗಿ ನಡೆದುಕೊಂಡಿಲ್ಲ. ನಮ್ಮ ಬಡಾವಣೆಯ ಜನರು ಮತದಾರ ಹಕ್ಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ನಾನು ಸಭೆ ನಡೆಸಿದ್ದೇನೆ. ಕಾನೂನು ಬಾಹಿರ ಇದ್ದರೆ ತನಿಖೆ ನಡೆಸಲಿ. ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್ ಹೊರ್ತಿ ಪ್ರತಿಕ್ರಿಯೆ ನೀಡಿದ್ದಾರೆ.

Share this