ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 12:
ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಜೆರಿಯಾಟ್ರಿಕ್ಸ್ ವಿಭಾಗ ಮತ್ತು ಶ್ರೀ ಸಂಗನಬಸವ ಮಹಾಸ್ವಾಮೀಜಿ ಕಾಲೇಜ್ ಆಫ್ ಫಾರ್ಮಸಿ ಅಂಡ್ ರಿಸರ್ಚ್ ಸೆಂಟರ್‌ನ ಫಾರ್ಮ್-ಡಿ ವಿಭಾಗದ ಪ್ರಕಟಿಸಿದ ಅಡ್ವಾನ್ಸ್ ಕೇರ್ ಪ್ಲ್ಯಾನಿಂಗ್ ಫಾರ್ ಅಲಝೈಮರ್ಸ್ ಡಿಸೀಸ್ ಆ್ಯಂಡ್ ಡೆಮೆನ್ಶಿಯಾ (Advance Care Planning for Alzheimer’s Disease and Dementia) ಕೃತಿಯನ್ನು ಬಿ.ಎಲ್.ಡಿ.ಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ್ ಗುರುವಾರ ಬಿಡುಗಡೆ ಮಾಡಿದರು.
ವಿವಿಯಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಈ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಲಝೈಮರ್ಸ್ ಕಾಯಿಲೆ ಮತ್ತು ಡಿಮೆನ್ಶಿಯಾ ಪೀಡಿತರ ಆರೈಕೆಯಲ್ಲಿ ತೊಡಗಿರುವ ವೈದ್ಯಕೀಯ, ನರ್ಸಿಂಗ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ರೋಗಿಗಳ ಆರೈಕೆದಾರರಿಗೆ ಈ ಪುಸ್ತಕ ಅತ್ಯಂತ ಉಪಯುಕ್ತವಾಗಲಿದೆ. ಡಿಮೆನ್ಶಿಯಾ ಆರೈಕೆಯಲ್ಲಿ ಬಳಸಲಾಗುವ ಮೂಲಭೂತ ಮಾಹಿತಿಯಿಂದ ಹಿಡಿದು ಆಧುನಿಕ ತಂತ್ರಜ್ಞಾನ ಮತ್ತು ಸಾಧನಗಳವರೆಗೆ ಸಮಗ್ರ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ ಎಂದು ಅವರು ಹೇಳಿದರು.
ಇದೇ ವೇಳೆ ಕೃತಿಯ ಲೇಖಕ ಮತ್ತು ಜೆರಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಆನಂದ ಪಿ. ಅಂಬಲಿ, ಫಾರ್ಮ್-ಡಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಸಿದ್ದಾರೂಢ ಎಂ. ಬಿರಾದಾರ ಹಾಗೂ ಕ್ಲಿನಿಕಲ್ ರಿಸರ್ಚ್ ಫೆಲೋ ಡಾ. ಬಸವರಾಜ ವಿ. ಅವರ ಕಾರ್ಯವನ್ನು ಅವರು ಶ್ಲಾಘಿಸಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಪತಿ ಡಾ. ಅರುಣ ಚಂ. ಇನಾಮದಾರ ಮಾತನಾಡಿ, ಈ ಪುಸ್ತಕ ವಿಜಯಪುರ ಜಿಲ್ಲೆ ಮಾತ್ರವಲ್ಲ ದೇಶ ವಿದೇಶಗಳಲ್ಲಿರುವ ಅಗತ್ಯವಿರುವ ಜನರಿಗೂ ತಲುಪಬೇಕು. ಮಾನವ ಆಯುಷ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಿಮೆನ್ಶಿಯಾ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ. ಇಂಥ ಸಂದರ್ಭದಲ್ಲಿ ಜೆರಿಯಾಟ್ರಿಕ್ಸ್ ಮತ್ತು ಫಾರ್ಮ್- ಡಿ ವಿಭಾಗಗಳು ಅಗತ್ಯವಿರುವ ಕುಟುಂಬಗಳಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೂಲಕ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಒದಗಿಸಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ. ಡೀಮ್ಡ್ ವಿವಿ ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ವೈದ್ಯಕೀಯ ವಿಭಾಗದ ಡೀನ್ ಮತ್ತು ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಶೆಟ್ಟಿ, ನಿರ್ದೇಶಕ ಡಾ. ಆರ್. ಬಿ. ಕೊಟ್ನಾಳ, ಉಪಪ್ರಾಚಾರ್ಯ ಮತ್ತು ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪಗೋಳ, ವೈದ್ಯಕೀಯ ಅಧೀಕ್ಷಕ ಡಾ. ಎಸ್. ಎನ್. ಬೆಂಟೂರ, ಐಕ್ಯೂಎಸಿ ನಿರ್ದೇಶಕಿ ಡಾ. ಸುಮಂಗಲಾ ಪಾಟೀಲ, ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ. ರವಿ ಬಿರಾದಾರ, ಉಪಕುಲಸಚಿವ ಸತೀಶ ಪಾಟೀಲ ಸೇರಿದಂತೆ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿ ಎಲ್ ಡಿ ಇ ಡೀಮ್ಡ್ ವಿವಿಯಲ್ಲಿ ಕೃತಿ ಬಿಡುಗಡೆ


