ಪುಸ್ತಕ ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ಜ್ಞಾನ ಭಂಡಾರ- ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ಇಂಡಿ, ಜೂ. 9: ಮೊಬೈಲ್ ಒಂದು ಸಂವಹನ ಸಾಧನ, ಆದರೆ ಪುಸ್ತಕ ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ಜ್ಞಾನ ಭಂಡಾರ.’ಮೊಬೈಲ್ ಬಿಡಿ-ಪುಸ್ತಕ ಹಿಡಿ’ ಇದು ಘೋಷಣೆ ಅಷ್ಟೇ ಅಲ್ಲ. ಬದಲಿಗೆ ಇಂದಿನ ಮಕ್ಕಳನ್ನು ರಕ್ಷಿಸುವ ಜೀವನಾಡಿಯಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಮಂಗಳವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ‘ಮೊಬೈಲ್ ಬಿಡಿ-ಪುಸ್ತಕ ಹಿಡಿ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಮೊಬೈಲ್‌ ಜಗತ್ತಿನಿಂದ ಹೊರಬಂದು, ನೈಜ ಜ್ಞಾನದ ಮೂಲವಾದ ಪುಸ್ತಕವನ್ನು ಹಿಡಿದಾಗ ಮಾತ್ರ ಉಜ್ವಲ ಭವಿಷ್ಯ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ. ಶಾಲಾ ಗ್ರಂಥಾಲಯ ಸದ್ಬಳಕೆಗೆ ಆದ್ಯತೆ ನೀಡಿ, ವಿದ್ಯಾರ್ಥಿಗಳಲ್ಲಿ ಸ್ವ-ಅಧ್ಯಯನದ ಆಸಕ್ತಿ ಹೆಚ್ಚಿಸಬೇಕು ಎಂದು ಅಭಿಪ್ರಾಯಪಟ್ಟರು.
ಶಿಕ್ಷಕ ಎಸ್.ಎಸ್. ಅರಬ ಮಾತನಾಡಿ, ಇಂದಿನ ಯುಗದಲ್ಲಿ ಮೊಬೈಲ್ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದು, ಅದರ ಅತಿ ಬಳಕೆ ಮಕ್ಕಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳನ್ನು ಮೊಬೈಲ್‌ ದಾಸ್ಯದಿಂದ ಮುಕ್ತಿಗೊಳಿಸಿ, ಜ್ಞಾನದ ಕಡಲಾದ ಪುಸ್ತಕಗಳತ್ತ ಸೆಳೆಯುವದೇ ಈ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಕೆ.ಆಯ್. ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕ ನಮ್ಮ ಅತ್ಯುತ್ತಮ ಸ್ನೇಹಿತ. ಪುಸ್ತಕ ಓದುವದರಿಂದ ಮಕ್ಕಳಲ್ಲಿ ಕಲ್ಪನಾ ಶಕ್ತಿ, ಸೃಜನಶೀಲತೆ, ಭಾಷಾ ಜ್ಞಾನ, ಪದಬಳಕೆ, ಆಲೋಚನಾ ಶಕ್ತಿ, ಉತ್ತಮ ಮೌಲ್ಯಗಳು ಬೆಳೆಯುತ್ತವೆ. ಮೊಬೈಲ್ ಜಗತ್ತಿನಲ್ಲಿ ಸಿಗದ ಶಾಂತಿ, ಜ್ಞಾನದ ಆನಂದ ಪುಸ್ತಕಗಳಲ್ಲಿದೆ. ಹಾಗಾಗಿ ಮಕ್ಕಳು ಪುಸ್ತಕ ಓದಿನತ್ತ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.
ಶಿಕ್ಷಕರಾದ ಎನ್.ಬಿ. ಚೌಧರಿ, ಎಸ್.ಪಿ. ಪೂಜಾರಿ ಸೇರಿದಂತೆ ಪಾಲಕರು, ಮಕ್ಕಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಮೊಬೈಲ್ ಬಿಡಿ-ಪುಸ್ತಕ ಹಿಡಿ ಅಭಿಯಾನದ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿ ಮಕ್ಕಳಿಗೆ ಮಾಹಿತಿ ನೀಡಲಾಯಿತು.

Share this