ಪುಸ್ತಕಗಳು ಮಾನವನ ಜ್ಞಾನ, ಸಂಸ್ಕೃತಿ ಮತ್ತು ವ್ಯಕ್ತಿತ್ವ ವಿಕಾಸದ ಅಡಿಪಾಯ: ಎನ್. ಎಂ ಬಿರಾದಾರ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 24 :
ಪುಸ್ತಕಗಳು ಮಾನವನ ಜ್ಞಾನ ಸಂಸ್ಕೃತಿ ಮತ್ತು ವ್ಯಕ್ತಿತ್ವ ವಿಕಾಸದ ಅಡಿಪಾಯವಾಗಿದ್ದು, ಓದು ಅಂತಃಪ್ರಜ್ಞೆಯ ಗ್ರಹಿಕೆಯಾಗಿದೆ ಎಂದು ನಗರದ ಚಾಣಕ್ಯ ಕರಿಯರ್ ಅಕಾಡೆಮಿ ಅಧ್ಯಕ್ಷ ಎನ್.ಎಂ.ಬಿರಾದಾರ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆˌ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ರಾಜಾಜಿನಗರದಲ್ಲಿರುವ ಸಾಹಿತಿ ಮುರುಗೇಶ ಸಂಗಮ ಅವರ ನಿವಾಸದಲ್ಲಿ ಶನಿವಾರ ಸಂಜೆ 4 ಗಂಟೆಗೆ ಜರುಗಿದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದ ಅಡಿಯಲ್ಲಿ ಗ್ರಂಥಾವಲೋಕನˌ ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣದಲ್ಲಿನ ಓದು ಮನಸನ್ನು ತಣಿಸದು. ಪುಸ್ತಕದ ಪುಟಗಳನ್ನು ತಿರುವಿ ಓದುವುದರಿಂದ ಸಿಗುವ ಜ್ಞಾನˌ ಅನುಭವˌ ಏಕಾಗ್ರತೆ ಬೇರೆಲ್ಲಿಯೂ ಸಿಗದು ಎಂದರು.
ಮುಖ್ಯ ಅತಿಥಿ ಸಾಹಿತಿ ಶಂಕರ ಬೈಚಬಾಳ ಮಾತನಾಡಿˌ ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ದೇಹದಂತೆ ಎಂಬ ಮಾತಿದೆ. ನಮ್ಮ ಮನೆ ಪುಸ್ತಕ ಮನೆಯಾದರೆ ಅದರ ಗೌರವವೆ ಬೇರೆ. ಮಸ್ತಕ ಏರಿಸುವ ಪುಸ್ತಕ ಓದಿದಾಗ ಬುದ್ಧಿ ಉದ್ದೀಪನಗೊಂಡುˌ ಸೃಜನಶೀಲತೆಯನ್ನು ಹೆಚ್ಚಿಸುವ ಜ್ಞಾನ ಎಂದಿಗೂ ನಮ್ಮನ್ನು ಬಿಟ್ಟು ಹೋಗದ ಸಂಪತ್ತು ಎಂದರು.
ಸಾಹಿತಿ ಅಡವಿಸ್ವಾಮಿ ಕೊಳಮಲಿ ಅವರು ಲೇಖಕ ಮುರುಗೇಶ ಸಂಗಮ ಅವರ ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ ಕೃತಿ ವಿಶ್ಲೇಷಿಸಿ ಬಸವಣ್ಣನವರ ಜನನ ಹಾಗೂ ಜೀವನ ಚರಿತ್ರೆ ಮತ್ತು ಬಸವನ ಬಾಗೇವಾಡಿಯಲ್ಲಿರುವ ಅವರ ಜನ್ಮಸ್ಥಳ ಸ್ಮಾರಕದ ಹಿನ್ನೆಲೆಯನ್ನು ಆಧಾರಸಹಿತವಾಗಿ ದಾಖಲಿಸಿದ ಸಂಶೋಧನಾತ್ಮಕತೆಯನ್ನು ಸಾಕ್ಷೀಕರಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಬಸವೇಶ್ವರರನ್ನು ಪರಿಚಯಿಸುವ ಕೆಲಸವನ್ನು ಗಟ್ಟಿ ಬರಹದ ಮೂಲಕ ಲೇಖಕರು ಲಿಖಿತ ಮತ್ತು ಮೌಲಿಕವಾಗಿ ಗ್ರಂಥದ ಆಶಯವನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕ ಓದಿದರೆ ಬಸವಣ್ಣನವರ ಇಡೀ ಜೀವನಾನುಭವದ ಸಮಗ್ರ ದರ್ಶನವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುಸ್ತಕ ಪ್ರಾಧಿಕಾರದ ರಾಜ್ಯ ಸದಸ್ಯ ಡಾ. ಕುಶಾಲ ಬರಗೂರು ಮಾತನಾಡಿˌ ಪುಸ್ತಕಗಳು ಬೌದ್ಧಿಕ ಬೆಳವಣಿಗೆಗೆ ಅರಿವಿನ ಬೆಳಕು ಬೀರುವ ಸಾಧನವಾಗಿವೆ. ವಿದ್ಯಾರ್ಜನೆಯ ತಪಸ್ಸು ಫಲಪ್ರದವಾಗಲು ಗ್ರಂಥಾಧ್ಯಯನದ ಅದಮ್ಯ ಆಸಕ್ತಿ ಮುಖ್ಯವಾಗಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯ ಸಹಾಯಕ ಮುರುಗೇಶ ಸಂಗಮ ಅವರ ಮನೆಯಲ್ಲಿ ಗ್ರಂಥಾಲಯ ಅನುಷ್ಠಾನಗೊಂಡಿರುವುದು ಸ್ತುತ್ಯಾರ್ಹ. ಓದುಗರುˌ ಲೇಖಕರು ಪ್ರಕಟಿಸುವ ಗ್ರಂಥಗಳನ್ನು ಕೊಂಡು ಓದುವ ಪೃವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಯುವಕರು ಮೊಬೈಲ್ ಗೀಳು ಕಡಿಮೆ ಮಾಡಿˌ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.
ಹಿರಿಯ ಸಾಹಿತಿ ಸಿದ್ಧಲಿಂಗ ಮನಹಳ್ಳಿ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಕಲ್ಯಾಣರಾವ ದೇಶಪಾಂಡೆˌ ಈರಮ್ಮ ಬೋನೂರˌ ಮಲ್ಲಿಕಾರ್ಜುನ ತೊದಲಬಾಗಿˌ ಮಹಾದೇವಿ ಪಾಟೀಲˌ ಸಂಗಮೇಶ ಚೂರಿˌ ಸವಿತಾ ಹಲಸಗಿˌ ಪೂರ್ಣಿಮಾ ಬಂಡಿˌ ಶಿವಾಜಿ ಮೋರೆˌ ದಾನೇಶ್ವರಿ ಆಲಾಳೆˌ ಅನುಪ್ರಿಯಾ ಬಿರಾದಾರˌ ಮಾದು ದೇವರ ತಮ್ಮ ಸ್ವರಚಿತ ಕವನ ವಾಚಿಸಿದರು. ಬಬಲೇಶ್ವರದ ಸಮಾಜಸೇವಕ ಡಾ. ಶಂಕರಗೌಡ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಬಸನಗೌಡ ಬಿರಾದಾರ ಸ್ವಾಗತಿಸಿದರು. ಪ್ರೊ. ಮಲ್ಲಿಕಾರ್ಜುನ ಅವಟಿ ನಿರೂಪಿಸಿದರು. ಸಾಹಿತಿ ಮುರುಗೇಶ ಸಂಗಮ ವಂದಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ತಹಸೀಲ್ದಾರ ಎಂ.ಎಸ್.ಕಳ್ಳಿಮನಿˌ ನಿವೃತ್ತ ಶಿಕ್ಷಕ ಶಿವಲಿಂಗ ಕಾರಜೋಳˌ ಸತೀಶ ಬಿರಾದಾರˌ ಎ.ಜಿ. ದೇಶಪಾಂಡೆˌ ಶಿವಾನಂದ ಬಿರಾದಾರˌ ಪಾರ್ವತಿ ಬಾಗೇವಾಡಿˌ ಜ್ಯೋತಿ ಸಂಗಮˌ ಪವನ ಜೋಶಿˌ ಸೋಮಶೇಖರ ಕೂಡಗಿˌ ಮಹಾವೀರ ಮುತ್ತಿನˌ ಎಂ.ಐ.ಬಿರಾದಾರˌ ನವೀನˌ ಸಂಗಮˌ ಹನುಮಂತ ಒಡ್ಡೊಡಗಿ ಮತ್ತಿತರರು ಉಪಸ್ಥಿತರಿದ್ದರು.

Share this