ಪುಸ್ತಕಗಳು ಮಾನವ ಜನಾಂಗದ ಆಸ್ತಿಯಾಗಬೇಕು: ಡಾ ಮಾನಸ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 28:
ಪುಸ್ತಕಗಳು ಮಾನವ ಜನಾಂಗದ ಆಸ್ತಿಯಾಗಬೇಕು. ಪ್ರತಿಯೊಂದು ಮನೆಯಲ್ಲಿ ದೇವರ ಪೂಜಾ ಕೋಣೆ ಇರುವಂತೆ ಮನೆಗೊಂದು ಗ್ರಂಥಾಲಯವಿದ್ದರೆ ಆ ಮನೆ ಜ್ಞಾನದ ಸಂಪತ್ತಿನಿಂದ ಕೂಡುತ್ತದೆ. ಯುವ ಜನಾಂಗಕ್ಕೆ ದಾರಿದೀಪವಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಲಕ್ಷಕ್ಕೂ ಅಧಿಕ ಮನೆಗಳಲ್ಲಿ ಮಾನೆಗೊಂದು ಗ್ರಂಥಾಲಯ ಅನುಷ್ಠಾನಗೊಳಿಸುವ ಗುರಿಯನ್ನು ಹೊಂದಿದೆ ಎಂದು ನುಡಿದರು.
ಬುಧವಾರ ವಿಜಯಪುರ ನಗರದ ಸುಕೂನ್ ಬಡಾವಣೆಯ ಲೇಖಕ ರಾಮಕುಮಾರ ಅವರ ಮನೆಯಲ್ಲಿ ಪ್ರಾಧಿಕಾರದ ಯೋಜನೆಯಲ್ಲಿಯೆ ಅತ್ಯಂತ ಪ್ರಮುಖ ಯೋಜನೆಯಾದ ಮನೆಗೊಂದು ಗ್ರಂಥಾಲಯದ ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುಸ್ತಕ ಓದುವ ಹವ್ಯಾಸ ಎಲ್ಲರೂ ಬೆಳೆಸಿಕೊಳ್ಳಬೇಕೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ವಿಜಯಪುರ ಜಿಲ್ಲೆ ಸಾಹಿತ್ಯ ಕ್ಷೇತ್ರದ ತವರೂರು. ಅಣ್ಣ ಬಸವಣ್ಣ ತನ್ನ ಜ್ಞಾನದಿಂದ ಜಗತ್ತಿಗೆ ಬೆಳಕನ್ನು ನೀಡಿದ್ದಾರೆ. ಹಲಸಂಗಿ ಗೆಳೆಯರ ಬಳಗದವರು ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಲೇಖಕ ಶ್ರೀರಾಮ ಕುಮಾರ ಅವರ 3 ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಸಮಿತಿಯ ಸದಸ್ಯ ಸಾಹಿತಿ ಎ.ಎಚ್. ಕೊಳಮಲಿ ಮಾತನಾಡಿ, ಪುಸ್ತಕಗಳ ಓದಿನಿಂದ ಬೌದ್ಧಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಸಂಚಾಲಕ ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಮನೆಯಲ್ಲಿ ಗ್ರಂಥಾಲಯ ನಿರ್ಮಾಣ ಮಾಡುವುದರಿಂದ ಮನೆಯು ಜ್ಞಾನ ದೇಗುಲದಂತೆ ಕಂಗೊಳಿಸುತ್ತದೆ ಎಂದು ಹೇಳಿದರು.
ಪ್ರಾಧಿಕಾರದ ಶ್ರೀನಿವಾಸ ಕರಿಯಪ್ಪ, ಶ್ರೀರಾಮಕುಮಾರ, ರವಿಕುಮಾರ, ಲಕ್ಷ್ಮಣ ಲಮಾಣಿ, ರಾಜಶೇಖರ ಕೌಲಗಿ , ಸಿದ್ದರಾಮ ಬಿರಾದಾರ, ರಾವಸಾಬ ಬಿರಾದಾರ, ಡಿ. ಜೋಸೆಫ್, ಸಿದ್ದಣ್ಣ ಸಾತಲಗಾಂವ, ಟಿ.ಆರ್. ಹಾವಿನಾಳ ಮತ್ತಿತರರು ಉಪಸ್ಥಿತರಿದ್ದರು.

Share this