ಸ್ವಂತ ಅಕ್ಕನ ಕೈಯಲ್ಲಿ ತಮ್ಮನ ಅಂತ್ಯ!

ಸಪ್ತಸಾಗರ ವಾರ್ತೆ,ಚಡಚಣ, ಜು. 11: ಕುಟುಂಬದೊಳಗಿನ ಕಲಹವೇ ರಕ್ತಸಿಕ್ತ ದುರಂತಕ್ಕೆ ಕಾರಣವಾದ ಬೆಚ್ಚಿಬೀಳಿಸುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಸಮೀಪ ಶನಿವಾರ ಸಂಜೆ ನಡೆದಿದೆ.
ಗಂಡ–ಹೆಂಡತಿ ನಡುವಿನ ದೀರ್ಘಕಾಲದ ವೈಮನಸ್ಸಿನ ನಡುವೆ, ಸ್ವಂತ ಅಕ್ಕನೇ ತನ್ನ ತಮ್ಮನ ಹತ್ಯೆ ನಡೆಸಿದ ಆರೋಪ ಕೇಳಿಬಂದಿದ್ದು, ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ.

ಹಲಸಂಗಿ ಗ್ರಾಮದ ಬಾಬುಸಾ ಮಹಾದೇವ ಜಮಾದಾರ (35) ಕೊಲೆಯಾದ ದುರ್ದೈವಿ. ಘಟನೆಯಲ್ಲಿ ಅಪ್ಪಾಸಾಹೇಬ ಮುಂಕಾಸೆ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸೋಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಐದು ವರ್ಷಗಳ ಹಿಂದಿನ ಮದುವೆ… ಅಂತ್ಯ ಮಾತ್ರ ರಕ್ತಸಿಕ್ತ!

ಮೃತ ಬಾಬುಸಾ ಅವರಿಗೆ ಸುಮಾರು ಐದು ವರ್ಷಗಳ ಹಿಂದೆ ಅವರ ಸ್ವಂತ ಅಕ್ಕ ಮಿನಾಕ್ಷೀ ಭತಗುಣಕಿ (ಜಮಾದಾರ) ತಮ್ಮ ಪುತ್ರಿ ಸತ್ಯವ್ವ ಅವರನ್ನು ವಿವಾಹ ಮಾಡಿಕೊಟ್ಟಿದ್ದರು. ಆದರೆ ಮದುವೆಯಾದ ದಿನದಿಂದಲೇ ದಾಂಪತ್ಯ ಜೀವನದಲ್ಲಿ ಆಗಾಗ ಕಲಹ ನಡೆಯುತ್ತಿದ್ದು, ಈ ವಿಚಾರ ಎರಡು ಕುಟುಂಬಗಳ ನಡುವೆಯೂ ತೀವ್ರ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಮಾತಿನ ಚಕಮಕಿ ಹತ್ಯೆಯಲ್ಲಿ ಅಂತ್

ಶನಿವಾರ ಸಂಜೆ ಬಾಬುಸಾ ಅವರು ಹಲಸಂಗಿ ಕ್ರಾಸ್‌ನಲ್ಲಿರುವ ಅಕ್ಕನ ಮನೆಗೆ ತೆರಳಿದ್ದ ವೇಳೆ ಗಂಡ–ಹೆಂಡತಿ ವಿಚಾರವಾಗಿ ಮತ್ತೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ಕ್ಷಣಾರ್ಧದಲ್ಲಿ ಹಿಂಸಾತ್ಮಕ ತಿರುವು ಪಡೆದು, ಅಕ್ಕ ಹಾಗೂ ಕುಟುಂಬದವರು ಬಾಬುಸಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ತೀವ್ರ ಗಾಯಗೊಂಡ ಬಾಬುಸಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಗಾಯಾಳುವಿಗೆ ಸೋಲಾಪುರದಲ್ಲಿ ಚಿಕಿತ್ಸೆ

ಘಟನೆಯಲ್ಲಿ ಮಧ್ಯಪ್ರವೇಶಿಸಲು ಮುಂದಾದ ಅಪ್ಪಾಸಾಹೇಬ ಮುಂಕಾಸೆ ಅವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ತುರ್ತುವಾಗಿ ಸೋಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ತನಿಖೆ ಆರಂಭ

ಘಟನೆ ಸಂಬಂಧ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಎಸ್ಪಿ ಸುಲ್ಪಿ, ಸಿಪಿಐ ಪರಶುರಾಮ ಮನಗೂಳಿ ಹಾಗೂ ಪಿಎಸ್ಐ ಮಂಜುನಾಥ ತಿರಕನ್ನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣವೇನು, ಘಟನೆಯಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share this