ಸಪ್ತಸಾಗರ ವಾರ್ತೆ, ವಿಜಯಪುರ, ಅ. 15: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವ ಆರೋಪಿ ಬಂಧನಕ್ಕೆ ಆಗ್ರಹಿಸಿ ನಾಳೆ (ಅ. 16ರಂದು) ವಿವಿಧ ಪ್ರಗತಿಪರ ಸಂಘಟನೆಗಳು ವಿಜಯಪುರ ಬಂದ್ ಗೆ ಕರೆ ನೀಡಿವೆ.
ಅವಶ್ಯಕ ವಸ್ತುಗಳು, ಔಷಧ ಹಾಗೂ ಆರೋಗ್ಯ ಸೇರಿದಂತೆ ತುರ್ತು ಸೇವೆಗಳು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಹುತೇಕ ಸ್ತಬ್ಧವಾಗಲಿವೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ನ್ಯಾಯವಾದಿಯೊಬ್ಬರು ಶೂ ಎಸೆದಿರುವುದು ಅತ್ಯಂತ ಖಂಡನಾರ್ಹ. ಇದು ಪ್ರಜಾಪ್ರಭುತ್ವ ಮೇಲೆ ಹಾಗೂ ಭಾರತೀಯ ಪವಿತ್ರ ನ್ಯಾಯದಾನ ವ್ಯವಸ್ಥೆಯ ಮೇಲೆ ನಡೆದ ದಾಳಿಯಾಗಿದೆ, ಇದನ್ನು ಸರ್ವರೂ ಖಂಡಿಸಲೇಬೇಕು. ಈ ಕಾರಣಕ್ಕೆ ಈ ಬಂದ್ ಗೆ ಕರೆ ನೀಡಲಾಗಿದೆ ಎಂದು ಮಾಜಿ ಶಾಸಕ ರಾಜು ಆಲಗೂರ ಹೇಳಿದ್ದಾರೆ.
ಈಗಾಗಲೇ ಬಂದ್ಗೆ ಬೆಂಬಲಿಸುವಂತೆ ಸಮಸ್ತ ವ್ಯಾಪಾರಸ್ಥ ಬಂಧುಗಳಿಗೆ ವಿನಂತಿಸಿಕೊಳ್ಳಲಾಗಿದೆ. ಇದು ಪಕ್ಷಾತೀತ ಬಂದ್ ಆಗಿದ್ದು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೂ ಸಹ ಬಂದ್ ಬೆಂಬಲಿಸುವಂತೆ ಕೋರಲಾಗಿದೆ. ಬಂದ್ಗೆ ಬೆಂಬಲಿಸುವುದಾಗಿ ಎಲ್ಲರೂ ಹೇಳಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ.
ಮದ್ಯ ಮಾರಾಟ ನಿಷೇಧ:
ಬಂದ್ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ವಿಜಯಪುರ ನಗರದಲ್ಲಿ ಅ.16 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿಯವರೆಗೆ ಎಲ್ಲಾ ಮದ್ಯ ಮಾರಾಟ ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಬೋಗದಾರರು ಮದ್ಯ ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ,ಜಿಲ್ಲಾ ದಂಡಾಧಿಕಾರಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಆದೇಶ ಹೊರಡಿಸಿದ್ದಾರೆ.
ಅ.16 ರಂದು ವಿಜಯಪುರ ಬಂದ್ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಜಯಪುರ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಅವರು ಆದೇಶಿಸಿದ್ದಾರೆ.
ಬಿಗಿಬಂದೋಬಸ್ತ್:
ವಿಜಯಪುರ ಬಂದ್ಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಈಗಾಗಲೇ ಪ್ರತಿಭಟನೆ ಹಾಗೂ ಬಂದ್ ಕರೆ ನೀಡಿದ ಸಂಘಟನೆಯ ಪ್ರಮುಖರ ಜೊತೆ ಹಲವಾರು ಸಭೆಗಳನ್ನು ನಡೆಸಲಾಗಿದೆ.
ನಿಯಮಾವಳಿ ಆಧರಿಸಿ ಪ್ರತಿಭಟನೆ ನಡೆಸಲು ಅವಕಾಶವಿದೆ, ಯಾವುದೇ ಕಾರಣಕ್ಕೂ ಶಾಂತಿಗೆ ಭಂಗ ತರದಂತೆ ಪ್ರತಿಭಟನೆ ಮಾಡದಂತೆ ಹೇಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.


