ಮನಗೂಳಿ ಕ್ಯಾನರಾ ಬ್ಯಾಂಕ್ ಕಳ್ಳತನ ಪ್ರಕರಣ: ಮತ್ತೆ 12 ಜನರ ಬಂಧನ, 39 ಕೆಜಿ ಬಂಗಾರ ಹಾಗೂ 1.16 ಕೋಟಿ ನಗದು ಜಫ್ತು


ಸಪ್ತಸಾಗರ ವಾರ್ತೆ ವಿಜಯಪುರ, ಜು. 11: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 12 ಜನರನ್ನು ಬಂಧಿಸಲಾಗಿದ್ದು, ಇದುವರೆಗೆ ಬಂದಿದ್ದರ ಸಂಖ್ಯೆ 15ಕ್ಕೇರಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಚೇತನಕುಮಾರ ರಾಠೋಡ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಪೊಲೀಸರು 3 ಆರೋಪಿಗಳನ್ನು ಬಂಧಿಸಿದ್ದಾರೆ. ಅವರು ನೀಡಿದ ಮಾಹಿತಿಯನ್ನು ಆಧರಿಸಿ
ಪ್ರಕರಣದ ಮತ್ತೆ 12 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಮೇ 25ರಂದು ಮನಗೂಳಿ ಕೆನರಾ ಬ್ಯಾಂಕ್ ನಲ್ಲಿ ಭಾರಿ ಪ್ರಮಾಣದ ಕಳ್ಳತನವಾಗಿತ್ತು. ಈ ಪ್ರಕರಣವನ್ನು ವಿಜಯಪುರ ಜಿಲ್ಲಾ ಪೊಲೀಸರು ಗಂಭೀರವಾಗಿ ಪರಿಗಣಿಸಿ, 100 ಸಿಬ್ಬಂದಿಗಳನ್ನು ಒಳಗೊಂಡ 8 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಈ ಪ್ರಕರಣದಲ್ಲಿ ಬೇಕಾಗಿದ್ದ ಒಟ್ಟು 15 ಜನರನ್ನು ಈಗ ಪೊಲೀಸರು ಬಂಧಿಸಿದ್ದಾರೆ ಎಂದವರು ತಿಳಿಸಿದರು.
ಬಂಧಿತ ಒಟ್ಟು 15 ಆರೋಪಿಗಳಿಂದ 39 ಕೆಜಿ ಗಟ್ಟಿ ಬಂಗಾರ, 1.16 ಕೋಟಿ ನಗದು, ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿದಂತೆ 39.26 ಕೋಟಿ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತು ಮಾಡಲಾಗಿದೆ ಎಂದು ತಿಳಿಸಿದರು.
ಬಾಲರಾಜ್ ಮಣಿಕಮ್ ಯರೆಕುಲಾ, ಚಂದನರಾಜ್ ಪಿಳ್ಳೈ, ಗುಂಡು ಜೋಸೆಫ್ ಶ್ಯಾಮಬಾಬು, ಪೀಟರ್ ಚಂದ್ರಪಾಲ್, ಇಜಾಜ್ ಧಾರವಾಡ, ಸುಸೈರಾಜ್ ಡ್ಯಾನಿಯಲ್, ಬಾಬುರಾವ್ ಮಿರಿಯಾಲ್, ಮಹಮ್ಮದ್ ಆಸೀಫ್ ಕಲ್ಲೂರ, ಅನಿಲ್ ಮಿರಿಯಾಲ್, ಮೋಹನಕುಮಾರ, ಸುಲೇಮನ್‌ವೇಸ್ಲಿ ಪಲುಕುರಿ, ಮರಿಯಾದಾಸ ಗೋನಾ ಬಂಧಿತ ಆರೋಪಿಗಳು.
ಅಲ್ಲದೇ ಈ ಹಿಂದೆ ಮೂವರು ಆರೋಪಿಗಳಾದ ವಿಜಯಕುಮಾರ ಮೋಹನ್ ರಾವ್ ಮಿರಿಯಾಲ, ಚಂದ್ರಶೇಖರ್ ಕೋಟಿಲಿಂಗಂ ನೆರೆಲ್ಲಾ, ಸುನಿಲ್ ನರಸಿಂಹಲು ಮೋಕಾ ಬಂಧಿತರಾಗಿದ್ದರು ಎಂದು ಅವರು ಹೇಳಿದ್ದಾರೆ.
ಬಂಧಿತ ಎಲ್ಲಾ ಆರೋಪಿತರು ಹುಬ್ಬಳ್ಳಿ ಮೂಲದವರು ಆಗಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share