‘ಚಂದ್ರಗಿರಿ’ ಚಿತ್ರ ಡಿಸೆಂಬರ್‌ನಲ್ಲಿ ತೆರೆಗೆ

ಸಪ್ತಸಾಗರ ವಾರ್ತೆ,ಬೆಂಗಳೂರು, ಅ. 18:
ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೆ.ಎಸ್. ಪಂಚಾಕ್ಷರಯ್ಯ, ಯಶಸ್, ದಾದಾನಂದಪ್ಪ ಕನಕಗಿರಿ, ಮರಿಸ್ವಾಮಿ ಹಾಗೂ ಅಹಿನಾ ಮನೋಜ್ ಜಂಟಿಯಾಗಿ ನಿರ್ಮಿಸುತ್ತಿರುವ ಬಹುನಿರೀಕ್ಷಿತ ‘ಚಂದ್ರಗಿರಿ’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದ ಶ್ರೀ ಗಡದಮ್ಮ ತಾಯಿ ಸನ್ನಿಧಿಯಲ್ಲಿ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯಿತು. ಈ ವೇಳೆ ನಟ ರಘುರಾಮ್ ಅಭಿನಯಿಸಿರುವ ‘ಮಾಯಾವಿ’ ಚಿತ್ರದ ‘ನನ್ನದು ನಮ್ಮದು ಎಲ್ಲ ಸುಳ್ಳು, ಅರಿಯೋ ನೀ ಮೊದಲು…’ ಎಂಬ ವಿಶೇಷ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರತಂಡ ಅಧಿಕೃತವಾಗಿ ಚಿತ್ರೀಕರಣಕ್ಕೆ ತೆರೆ ಎಳೆದಿದೆ.
ಚಿತ್ರದ ನಿರ್ದೇಶನದ ಜತೆಗೆ ರಾಜೀವ್ ಕೃಷ್ಣ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ ಸಂಯೋಜನೆ ಹಾಗೂ ನೃತ್ಯ ನಿರ್ದೇಶನದ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಭಯಾನಕ ಸನ್ನಿವೇಶಗಳು, ಕುತೂಹಲಕಾರಿ ತಿರುವುಗಳು, ರೋಚಕ ಘಟನೆಗಳು, ಹಾರರ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಚಿತ್ರವಾಗಿ ‘ಚಂದ್ರಗಿರಿ’ ಮೂಡಿಬರುತ್ತಿದೆ.
ಚಿತ್ರದಲ್ಲಿ ಹಿರಿಯ ನಟ ಶೋಭರಾಜ್, ಪಂಚಾಕ್ಷರಯ್ಯ, ಯಶಸ್, ಮರಿಸ್ವಾಮಿ, ಶಿಲ್ಪಾ ಶ್ರೀನಿವಾಸ್, ಉಗ್ರಂ ರವಿ, ಬಲರಾಮ್ ಪಾಂಚಾಳ್, ಕಿಶೋರ್ ಕಾಸರಗೋಡು, ರಘುರಾಮ್, ರೂಪಶ್ರೀ, ನಂದಿನಿ ಕಮ್ಮಯ್ಯ, ಶಶಿರೇಖಾ ಹಾಗೂ ಮಾಸ್ಟರ್ ವೀರಧನುಷ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.
ರಾಜೀವ್ ಕೃಷ್ಣ ನಿರ್ದೇಶನದೊಂದಿಗೆ ಸಂಗೀತ ಸಂಯೋಜನೆ ಮತ್ತು ನೃತ್ಯ ನಿರ್ದೇಶನವನ್ನೂ ಮಾಡಿದ್ದಾರೆ. ಗುರುದತ್ ಮುಸರಿ ಛಾಯಾಗ್ರಹಣ, ಯುವರಾಜ್ ಬಿ. ಸಂಕಲನ, ವೈಲೆಂಟ್ ವೇಲು ಸಾಹಸ ನಿರ್ದೇಶನ, ದೇವ್ ಕೆ. ಅಂಬಿಗಿ ಗೀತಸಾಹಿತ್ಯ ಹಾಗೂ ಎಂ.ಜಿ. ಕ್ಲೇಶ, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಗಿ ಮತ್ತು ವಿ.ಎಂ.ಎಸ್. ಗೋಪಿ ಸೇರಿದಂತೆ ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ.
ಚಿತ್ರೀಕರಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿದ್ದು, ಡಿಸೆಂಬರ್‌ನಲ್ಲಿ ರಾಜ್ಯಾದ್ಯಂತ ಚಿತ್ರವನ್ನು ತೆರೆಗೆ ತರಲು ಯೋಜನೆ ರೂಪಿಸಿದೆ. ವಿಭಿನ್ನ ಕಥಾವಸ್ತು, ಕಲಾವಿದರ ಅಭಿನಯ ಹಾಗೂ ತಾಂತ್ರಿಕ ಶ್ರೀಮಂತಿಕೆಯೊಂದಿಗೆ ಮೂಡಿಬರುತ್ತಿರುವ ‘ಚಂದ್ರಗಿರಿ’ ಕನ್ನಡ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

Share this