ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 23:
ಪ್ರವಾಸೋದ್ಯಮ ಇಲಾಖೆಯ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ವಿಜಯಪುರದ ಅಪ್ಪ ಫೌಂಡೇಶನ್ ವತಿಯಿಂದ ಮಕ್ಕಳ ಚಿತ್ರಕಲಾ ಪ್ರದರ್ಶನ ಹಾಗೂ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ರೇಖಾಚಿತ್ರ ರಚಿಸುವ ಮೂಲಕ ಕಲಾವಿದ ಸತೀಶ್ ಹಿರೇಮಠ ಉದ್ಘಾಟಿಸಿದರು. ಶಿಕ್ಷಕ ಟಿ.ವಿ. ಮಲಗೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎನ್.ಎ. ಚಿಮ್ಮಲಗಿ ಮಾತನಾಡಿ, ಅಪ್ಪ ಫೌಂಡೇಶನ್ನ ಉದ್ದೇಶ ಹಾಗೂ ಮಕ್ಕಳಿಗಾಗಿ ನಡೆಸುತ್ತಿರುವ ವಿವಿಧ ಚಟುವಟಿಕೆಗಳ ಕುರಿತು ವಿವರಿಸಿದರು. ‘ಅಪ್ಪ’ ಎಂಬುದು ಕೇವಲ ಒಂದು ಪದವಲ್ಲ. ಮಕ್ಕಳಿಗೆ ದಾರಿ ತೋರಿಸುವ, ಪ್ರೋತ್ಸಾಹಿಸುವ, ಕಾಳಜಿ ವಹಿಸುವ ಹಾಗೂ ಕಷ್ಟ-ಸುಖಗಳಲ್ಲಿ ಜೊತೆಯಾಗಿ ನಿಂತು ಅವರ ಪ್ರತಿಭೆಗೆ ಬೆಂಬಲ ನೀಡುವ ಮಹತ್ವದ ವ್ಯಕ್ತಿತ್ವ ಎಂದು ಹೇಳಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿಯ ನಿಕಟಪೂರ್ವ ಸದಸ್ಯ ರಮೇಶ ಚವ್ಹಾಣ ಮಾತನಾಡಿ, ಗಣೇಶ ಹಬ್ಬದ ಅಂಗವಾಗಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವುದು ಸಂತಸದ ಸಂಗತಿ. ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಮೂಲಕ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಕಲಾ ವೇದಿಕೆ ಕಲ್ಪಿಸುತ್ತಿರುವ ಅಪ್ಪ ಫೌಂಡೇಶನ್ನ ಕಾರ್ಯವನ್ನು ಶ್ಲಾಘಿಸಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರಗಳನ್ನು ರಚಿಸಿದ ಮಕ್ಕಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆನಂದ ರಜುಂಡೆ, ಶಿವಾನಂದ ಅಥಣಿ, ಮದನ್ ವಗ್ಯಾನವರ್, ಕಮಲೇಶ ಭಜಂತ್ರಿ, ನಯೀಮ್ ನಾಗಠಾಣ, ಸಿದ್ದು ಬಳ್ಳುರ್ಗಿಡದ, ಸಲಿಮ್ ವಾಲೀಕಾರ, ಸುಖದೇವ ಕಾಂಬಳೆ, ಪ್ರಜ್ವಲ್ ಬಿರಾದಾರ, ಗೌರೀಶ್ ಮಲಗೊಂಡ ಸೇರಿದಂತೆ ಕಲಾವಿದರು, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಹಾಗೂ ಅಪ್ಪ ಫೌಂಡೇಶನ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಕ್ಕಳ ಚಿತ್ರಕಲಾ ಪ್ರದರ್ಶನ, ಬಹುಮಾನ ವಿತರಣೆ


