ಪೌಷ್ಟಿಕತೆ, ಸ್ವಾಸ್ಥ್ಯ, ಶುಚಿತ್ವ ಮಕ್ಕಳ ಬೆಳವಣಿಗೆಯ ಮೂರು ಸ್ತಂಭಗಳು
ಸಪ್ತಸಾಗರ ವಾರ್ತೆ, ಇಂಡಿ, ಸೆ. 19:
ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಆಧಾರಿತ ಜಗತ್ತಿನಲ್ಲಿ ಮಕ್ಕಳ ದೈಹಿಕ, ಮಾನಸಿಕ ಮತ್ತು ಸರ್ವಾಂಗೀಣ ಬೆಳವಣಿಗೆಗೆ ಪೌಷ್ಟಿಕತೆ, ಸ್ವಾಸ್ಥ್ಯ ಹಾಗೂ ಶುಚಿತ್ವ ಅತ್ಯಂತ ಅಗತ್ಯವಾಗಿವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಸಂಭ್ರಮ ಶನಿವಾರದ ನಿಮಿತ್ತ ಹಮ್ಮಿಕೊಂಡಿದ್ದ ‘ಪೌಷ್ಟಿಕತೆ, ಸ್ವಾಸ್ಥ್ಯ ಮತ್ತು ನೈರ್ಮಲೀಕರಣ’ ವಿಷಯದ ಕುರಿತು ಅವರು ಮಾತನಾಡಿದರು.
ಇಂದಿನ ಮಕ್ಕಳೇ ದೇಶದ ನಾಳಿನ ಪ್ರಜೆಗಳು. ಮಕ್ಕಳ ಆರೋಗ್ಯ ದೇಶದ ಪ್ರಗತಿಯ ಸಂಕೇತವಾಗಿದೆ. ಪಾಲಕರು ಕೇವಲ ಅಂಕ ಗಳಿಕೆಗೆ ಮಹತ್ವ ನೀಡದೆ, ಮಕ್ಕಳಲ್ಲಿ ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಹಾಗೂ ಶುಚಿತ್ವದ ಸಂಸ್ಕೃತಿಯನ್ನು ಬೆಳೆಸಬೇಕು. ಇದರಿಂದ ಮಾತ್ರ ಆರೋಗ್ಯಯುತ ಹಾಗೂ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಶಿಕ್ಷಕ ಎಸ್.ಎಸ್. ಅರಬ ಮಾತನಾಡಿ, ಊಟಕ್ಕೆ ಮೊದಲು ಮತ್ತು ನಂತರ ಕೈ ತೊಳೆಯುವುದು, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಪ್ರತಿದಿನ ಸ್ನಾನ ಮಾಡುವುದು ಹಾಗೂ ಉಗುರುಗಳನ್ನು ಕತ್ತರಿಸಿಕೊಳ್ಳುವಂತಹ ಸ್ವಚ್ಛತೆಯ ಅಭ್ಯಾಸಗಳನ್ನು ಬಾಲ್ಯದಲ್ಲಿಯೇ ರೂಢಿಸಿಕೊಳ್ಳಬೇಕು. ಇಂತಹ ಉತ್ತಮ ಅಭ್ಯಾಸಗಳು ಮಕ್ಕಳ ಆರೋಗ್ಯ ಕಾಪಾಡುವುದರ ಜೊತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತವೆ ಎಂದರು.
ಮುಖ್ಯ ಶಿಕ್ಷಕ ಕೆ.ಐ. ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಸಮೃದ್ಧ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಮೂಲ್ಯವಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ಅವರಿಗೆ ಸೂಕ್ತ ಪೌಷ್ಟಿಕ ಆಹಾರ ದೊರೆಯುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎನ್.ಬಿ. ಚೌಧರಿ, ಎಸ್.ಪಿ. ಪೂಜಾರಿ, ಅತಿಥಿ ಶಿಕ್ಷಕ ಅಫ್ತಾಬ್ ಮುಲ್ಲಾ, ಕುಲಶಾಬಿ ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


