ಸಪ್ತಸಾಗರ ವಾರ್ತೆ,ಬೆಂಗಳೂರು, ಆ.12: ನೀಟ್ ಪರೀಕ್ಷೆ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯನ್ನು ರದ್ದುಪಡಿಸಿ, ವೈದ್ಯಕೀಯ ಪ್ರವೇಶದ ಅಧಿಕಾರವನ್ನು ರಾಜ್ಯಗಳಿಗೆ ಮರಳಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಕರ್ನಾಟಕ ನಾಗರಿಕ ಸಮಾಜ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರಿಗೆ ಮನವಿ ಮಾಡಿದೆ.
ನೀಟ್ ವ್ಯವಸ್ಥೆಯಿಂದ ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆ, ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳಿಗೆ ಧಕ್ಕೆಯಾಗುತ್ತಿದೆ. ದುಬಾರಿ ತರಬೇತಿ ಕೇಂದ್ರಗಳ ಅವಲಂಬನೆ, ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಎದುರಾಗುವ ಅಸಮಾನತೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಪರೀಕ್ಷಾ ಅಕ್ರಮಗಳು ಕೇಂದ್ರೀಕೃತ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಾಗಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕರ್ನಾಟಕದ ವೈದ್ಯಕೀಯ ಪ್ರವೇಶಕ್ಕೆ ದ್ವಿತೀಯ ಪಿಯುಸಿ/+2 ಅಂಕಗಳನ್ನು ವೈಜ್ಞಾನಿಕ ನಾರ್ಮಲೈಸೇಷನ್ ಹಾಗೂ ಸಂವಿಧಾನಬದ್ಧ ಮೀಸಲಾತಿಯೊಂದಿಗೆ ಪರಿಗಣಿಸುವ ರಾಜ್ಯ ನೀತಿ ರೂಪಿಸಬೇಕು. ತಮಿಳುನಾಡು ಮಾದರಿಯಲ್ಲಿ ಪ್ರತ್ಯೇಕ ಮಸೂದೆ ರೂಪಿಸಿ ರಾಷ್ಟ್ರಪತಿಯ ಅನುಮೋದನೆಗೆ ಕಳುಹಿಸಬೇಕು ಹಾಗೂ ನೀಟ್ ವಿರೋಧಿ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ನಾಗರಿಕ ಸಮಾಜ ಆಗ್ರಹಿಸಿದೆ.
ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನ್ಯಾ. ಗೋಪಾಲಗೌಡ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಸಾಹಿತಿ ಬಸವರಾಜ ಸೂಳಿಭಾವಿ ಸೇರಿದಂತೆ ಸಾಹಿತಿಗಳು, ಪತ್ರಕರ್ತರು, ವೈದ್ಯರು, ಪ್ರಾಧ್ಯಾಪಕರು, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ 117 ಮಂದಿ ಮನವಿಗೆ ಸಹಿ ಹಾಕಿದ್ದಾರೆ.
Editor
Rudrappa B Asangi
Editor
Managing Editor
Chetan Asangi
Managing Editor


