ಸಪ್ತಸಾಗರ ವಾರ್ತೆ, ವಿಜಯಪುರ, ಅ. 9 : ಮಳೆ ನೀರು ಬಂದಾಗ ಅನೇಕ ಬಡಾವಣೆಗಳು ಅಕ್ಷರಶ: ನಡುಗಡ್ಡೆಯಾಗುತ್ತವೆ. ಈ ಎಲ್ಲ ಸಮಸ್ಯೆಗಳಿಗೆ ರಾಜಕಾಲುವೆಗಳ ವ್ಯವಸ್ಥೆ ಪುನರುಜ್ಜೀವನಗೊಳಿಸುವುದೇ ಪರಿಹಾರವಾಗಿದೆ. ಆದಿಲ್ಶಾಹಿ ಕಾಲದಲ್ಲಿ ಈಗಿರುವ ಜನಸಂಖ್ಯೆಗಿಂತ ೧೦ ಪಟ್ಟು ಹೆಚ್ಚು ಜನಸಂಖ್ಯೆ ಇತ್ತು. ಅರಸು ನೀರಿನ ಸಮರ್ಥ ಸದ್ಭಳಕೆಯ ಜೊತೆಗೆ ಮಳೆ ನೀರು ಹರಿದು ಹೋಗಲು, ಚರಂಡಿ ನೀರು ಹರಿದು ಹೋಗಲು ರಾಜಕಾಲುವೆ ನಿರ್ಮಿಸಿದ್ದರು. ಈ ವ್ಯವಸ್ಥೆ ಈಗಲೂ ಇದೆ. ಆದರೆ ರಾಜಕಾಲುವೆಗಳ ಒತ್ತುವರಿಯಿಂದಾಗಿ ನಗರದ ನೀರು ಹೊರ ಹೋಗದೇ ಅವೈಜ್ಞಾನಿಕವಾಗಿ ಹರಿದು ಬಡಾವಣೆಗಳಿಗೆ ನುಗ್ಗುತ್ತಿದೆ ಎಂದು ಹಿರಿಯ ರಾಜಕೀಯ ಮುಖಂಡ ಬಿ.ಎಚ್. ಮಹಾಬರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯಪುರ ನಗರಕ್ಕೆ ಸಂಬಂಧಿಸಿದ ಪುರಾತನವಾದ ಬೃಹತ್ ನಕ್ಷೆಗಳನ್ನು ಪ್ರದರ್ಶಿಸಿ ರಾಜಕಾಲುವೆಗಳ ಪುನರುಜ್ಜೀವನ ಕುರಿತು ಬೆಳಕು ಚೆಲ್ಲಿದ ಅವರು, ೬೦/೨೦ ಡೀಪ್ ಇರುವ ರಾಜಕಾಲುವೆ ವಿಜಯಪುರದಲ್ಲಿದ್ದವು ಎಂಬುದನ್ನು ವೈಜ್ಞಾನಿಕ ದಾಖಲಾತಿಗಳಿವೆ. ಆದರೆ ಈಗ ರಾಜಕಾಲುವೆ ಪುನರುಜ್ಜೀವನ ಕಾಮಗಾರಿಗಳು ಸಂಪೂರ್ಣ ಅವೈಜ್ಞಾನಿಕವಾಗಿ ನಡೆಯುತ್ತಿವೆ ಎನ್ನಬಹುದಾಗಿದೆ. ಆರ್ಟಿಓ ಆಫೀಸ್ನಿಂದ – ನವಭಾಗವರೆಗೆ ೮/೬ ಆಳಕ್ಕೆ ಸೀಮಿತವಾಗಿರುವಂತೆ ರಾಜಕಾಲುವೆಗಳ ಪುನರುಜ್ಜೀವನಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ ಇದು ಸಂಪೂರ್ಣ ಅವೈಜ್ಞಾನಿಕವಾಗಿವೆ ಎಂದು ಆರೋಪಿಸಿದರು.
೨೦೧೩-೧೪ ನೇ ಸಾಲಿನಲ್ಲಿ ಅಂದು ಸಹ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ. ಎಂ.ಬಿ. ಪಾಟೀಲ ಅವರು ಇಡೀ ಅಧಿಕಾರಿಗಳ ತಂಡ ಕಟ್ಟಿಕೊಂಡು ನಗರ ಪ್ರದಕ್ಷಿಣೆ ಮಾಡಿದ್ದರು. ಮಳೆ ನೀರು ನಿಲ್ಲಲು ರಾಜಕಾಲುವೆಗಳ ಒತ್ತುವರಿಯೇ ಕಾರಣ ಎಂಬುದು ಅವರ ಗಮನಕ್ಕೆ ಬಂದಿತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಸಚಿವರು ವಿಶೇಷ ಕಾಳಜಿ ವಹಿಸಿ ರಾಜಕಾಲುವೆ ಒತ್ತುವರಿ ತೆರವಿಗೆ ಖಡಕ್ ಸೂಚನೆ ನೀಡಿದ್ದರು. ಆದರೆ ಅಧಿಕಾರಿಗಳು ಈ ವಿಷಯವಾಗಿ ನಿರ್ಲಕ್ಷ್ಯ ನೀತಿ ತೋರುತ್ತಲೇ ಇದ್ದಾರೆ. ಅಂದು ಸಚಿವರ ಸುದೀರ್ಘ ಸಭೆ ನಡೆಸಿದ್ದು, ಸಭೆಯ ನಡಾವಳಿಗಳ ಪ್ರತಿ ಸಹ ಅಧಿಕಾರಿಗಳು ನೀಡುತ್ತಿಲ್ಲ ಎಂದರು.
ವಿಜಯಪುರ ಈ ಹಿಂದೆ ಮುಂಬಯಿ ಕರ್ನಾಟಕ ಭಾಗವಾಗಿದ್ದ ಸಂದರ್ಭದಲ್ಲಿ ಸಾತಾರ್ ಜಿಲ್ಲೆಯ ಭಾಗವಾಗಿತ್ತು. ನಂತರ ಕಲಾದಗಿ ಜಿಲ್ಲೆಯ ಭಾಗವಾಯಿತು. ನಂತರ ಮನಗೂಳಿ ತಾಲೂಕು ವ್ಯಾಪ್ತಿಗೆ ಒಳಪಟ್ಟಿತ್ತು. ಆ ಸಂದರ್ಭದಲ್ಲಿದ್ದ ನಗರದ ನಕಾಶೆಗಳು, ಮಹತ್ವದ ದಾಖಲೆಗಳು ಮಹಾರಾಷ್ಟ್ರ ಸರ್ಕಾರದ ಬಳಿ ಇವೆ. ಇವುಗಳನ್ನು ಪುನ: ತಂದು ಅಧ್ಯಯನ ಮಾಡಿ ಅವುಗಳನ್ನು ಮ್ಯೂಸಿಯಂನಲ್ಲಿ ಇರಿಸುವ ನಿಟ್ಟಿನಲ್ಲಿಯೂ ಸಚಿವ ಡಾ. ಎಂ.ಬಿ. ಪಾಟೀಲರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಈ ನಿರ್ದೇಶನ ಪಾಲನೆಯಾಗಿಲ್ಲ. ಈ ನಕಾಶೆಗಳು ಬಂದರೆ ರಾಜಕಾಲುವೆಗಳ ಜಾಲ ಸ್ಪಷ್ಟವಾಗಿ ಅರಿವಾಗುತ್ತದೆ. ಆದರೆ ಅಧಿಕಾರಿಗಳು ಮಾತ್ರ ಈ ವಿಷಯದಲ್ಲಿ ಜಾಣಮೌನ ವಹಿಸಿದ್ದಾರೆ.
ರಾಮನಗರ, ಶಹಾಪೇಟಿ, ಗಚ್ಚಿನಕಟ್ಟಿ ಕಾಲೋನಿ, ನವಭಾಗ, ತಾಜ್ಬಾವಡಿ ಸೇರಿದಂತೆ ಅನೇಕ ಭಾಗದ ಬಡಾವಣೆಗಳು ಮಳೆ ಬಂದರೆ ಸಂಪೂರ್ಣ ಮಳೆ ನೀರು ಮನೆ ಸೇರುತ್ತದೆ. ಮಳೆ ನೀರು ಅಷ್ಟೇ ಅಲ್ಲದೇ ಚರಂಡಿ ನೀರು ಸಹ ಅವರ ಮನೆಗೆ ನುಗ್ಗುತ್ತಿದೆ. ಅವರ ಅವ್ಯವಸ್ಥೆ ನೋಡಿದರೆ ನಮಗೆ ಕಣ್ಣೀರು ಬರುತ್ತದೆ. ರಾಜಕಾಲುವೆಗಳು ಒತ್ತುವರಿಯಾದ ಪರಿಣಾಮವೇ ಮಳೆಗಾಲ ಬಂದರೆ ವಿಜಯಪುರ ನಡುಗಡ್ಡೆಯಾಗುತ್ತಿದೆ ಎಂದು ತಿಳಿಸಿದರು.
ಪುರಾತತ್ವ ವಲಯ ಕಚೇರಿ ವಿಜಯಪುರದಲ್ಲಿ ಆರಂಭವಾಗಲಿ
ವಿಜಯಪುರಕ್ಕೆ ಸಂಬಂಧಿಸಿದಂತೆ ೧೮೮೬ ರಲ್ಲಿ ನಕಾಶೆ ರಚನೆಯಾಗಿದೆ. ಇದು ಮೋಡಿ ಭಾಷೆಯಲ್ಲಿದೆ. ಈ ನಕಾಶೆ ಅಧ್ಯಯನ ಮಾಡಿದರೆ ನೀರು ಹರಿದು ಹೋಗಲು ಇದ್ದ ರಾಜಕಾಲುವೆಯ ಸಂಪೂರ್ಣ ಮಾಹಿತಿ ದೊರಕುತ್ತದೆ. ಈ ಬಗ್ಗೆ ಅಧ್ಯಯನ ನಡೆಯಬೇಕಿದೆ. ಆದರೆ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಜೊತೆ ಪತ್ರ ವ್ಯವಹಾರ ಮಾಡುವುದೇ ಸಾಹಸಮಯ ಕೆಲಸವಾಗಿದೆ. ಇಲಾಖೆಯ ಮುಖ್ಯ ಕಚೇರಿ ಇರುವುದು ಆಗ್ರಾದಲ್ಲಿ, ವೃತ್ತೀಯ ಕಚೇರಿ ಇರುವುದು ಧಾರವಾಡದಲ್ಲಿ, ಜಂಟಿ ನಿರ್ದೇಶಕರ ಕಚೇರಿ ಇರುವುದು ಬೆಂಗಳೂರಿನಲ್ಲಿ. ಹೀಗಾಗಿ ಪತ್ರ ವ್ಯವಹಾರ ನಡೆಸಿ ಅವರಿಂದ ಸ್ಪಂದನೆ ದೊರಕುವುದೇ ಒಂದು ದೊಡ್ಡ ತಲೆನೋವಾಗಿದೆ. ಅತ್ತ ಉದ್ಯಾನವನ ನಿರ್ವಹಣೆಗೆ ಮೊದಲು ಅನೇಕ ಉದ್ಯೋಗಿಗಳು ಇರುತ್ತಿದ್ದರೂ ಆದರೆ ಈಗ ಸೆಕ್ಯೂರಿಟಿಗಳ ಮೇಲೆ ಎಲ್ಲವೂ ನಡಯುತ್ತಿದೆ. ಇಬ್ರಾಹಿಂ ರೋಜಾ, ಅಲಿರೋಜಾದಂತಹ ಕಟ್ಟಡಗಳು ನೀರಿನಲ್ಲಿ ಮುಳುಗಿದರೂ ಸಹ ಎಎಸ್ಐ ಮಾತ್ರ ಕಣ್ಣು ಬಿಡುತ್ತಿಲ್ಲ. ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವೃತ್ತೀಯ ಕಚೇರಿಯನ್ನು ವಿಜಯಪುರದಲ್ಲಿಯೇ ಸ್ಥಾಪಿಸಬೇಕು. ಇಲ್ಲಿ ನೂರಾರು ಸ್ಮಾರಕಗಳಿವೆ. ಇವುಗಳ ವ್ಯವಸ್ಥಿತ ನಿರ್ವಹಣೆ, ಅಭಿವೃದ್ಧಿ ದೃಷ್ಟಿಯಿಂದ ಕೂಡಲೇ ಇಲ್ಲಿ ವೃತ್ತೀಯ ಕಚೇರಿ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಬೇಕಿದೆ ಎಂದರು.


