ಸಪ್ತಸಾಗರ ವಾರ್ತೆ ನವದೆಹಲಿ, ಜೂ.12:
“ರಾಜ್ಯದ ನೀರಾವರಿ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ನಾನು, ರಾಮಲಿಂಗಾ ರೆಡ್ಡಿ ಹಾಗೂ ಟಿ.ಬಿ ಜಯಚಂದ್ರ ಅವರು ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ನವದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಕೇಂದ್ರ ಜಲಶಕ್ತಿ ಸಚಿವರ ಭೇಟಿ ಬಗ್ಗೆ ಕೇಳಿದಾಗ, “ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು, ಕೃಷ್ಣಾ ನೀರು ವಿವಾದ ನ್ಯಾಯಾಧೀಕರಣ ತೀರ್ಪಿನ ಅನ್ವಯ ಅಧಿಸೂಚನೆ, ಮಹದಾಯಿ ನೀರು, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ 5,300 ಕೋಟಿ ರೂ. ಅನುದಾನ ವಿಚಾರವಾಗಿ ಪ್ರಸ್ತಾಪಿಸಿದ್ದೇವೆ” ಎಂದು ತಿಳಿಸಿದರು.
ಕೇಂದ್ರ ಸಚಿವರಿಂದ ತುಂಗಭದ್ರಾ ಅಣೆಕಟ್ಟು ನೂತನ ಗೇಟ್ ಉದ್ಘಾಟನೆ
“ತುಂಗಭದ್ರಾ ಅಣೆಕಟ್ಟಿನ ನೂತನ ಗೇಟ್ ಗಳ ಉದ್ಘಾಟನೆಗೆ ಕೇಂದ್ರ ಜಲಶಕ್ತಿ ಸಚಿವರು ಆಗಮಿಸುತ್ತಿದ್ದು, ನೆರೆ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ಸಾಧ್ಯತೆ ಇದೆ. ನ್ಯಾಯ ನೀಡುವ ಸ್ಥಾನದಲ್ಲಿ ಕೂತು ಅವರು ಅನ್ಯಾಯ ಮಾಡುವುದಿಲ್ಲ ಎಂಬ ವಿಶ್ವಾಸ ನಮಗಿದೆ”ಎಂದು ತಿಳಿಸಿದರು.
ಪ್ರಧಾನಮಂತ್ರಿಗಳಿಗೆ ನೀಡಿರುವ ಮನವಿ ಬಗ್ಗೆ ಕೇಳಿದಾಗ, “ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೃಷಿ, ನೀರಾವರಿ, ನಗರಾಭಿವೃದ್ಧಿ, ಸಂಚಾರ ವಿಚಾರಗಳಿಗೆ ಸಂಬಂಧಿಸಿದಂತೆ ಮನವಿ ಮಾಡಲಾಗಿದೆ. ಅವರು ಪರಿಶೀಲಿಸಿ ತೀರ್ಮಾನ ಮಾಡಲಿದ್ದಾರೆ” ಎಂದು ತಿಳಿಸಿದರು.
ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ, ಮನ್ಸೂರ್ ಖಾನ್ ಅವರು ಅವಿರೋಧ ಆಯ್ಕೆ ಬಗ್ಗೆ ಕೇಳಿದಾಗ, “ನಮ್ಮ ಬಳಿ ಸಂಖ್ಯಾಬಲವಿತ್ತು. ಕರ್ನಾಟಕದ ಜನತೆ ನಮಗೆ ಸಂಖ್ಯಾಬಲದ ಆಶೀರ್ವಾದ ನೀಡಿದ್ದರು. ಆ ಸಂಖ್ಯಾಬಲವೇ ಈಗ ಫಲ ನೀಡಿದೆ” ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ, “ಮುಂದಿನ ದಿನಗಳಲ್ಲಿ ನೋಡೋಣ” ಎಂದು ತಿಳಿಸಿದರು.


