ಕೊಯಿಮತ್ತೂರು ಬ್ಲಾಸ್ಟ್ ಪ್ರಕರಣ: ಓರ್ವ ಆರೋಪಿ ಬಂಧನ


ಸಪ್ತಸಾಗರ ವಾರ್ತೆ, ವಿಜಯಪುರ, ಜು. 10:
ತಮಿಳುನಾಡಿನ ಕೊಯಿಮತ್ತೂರಿನಲ್ಲಿ ನಡೆದ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ವಾಸವಾಗಿದ್ದ ಪ್ರಮುಖ ಆರೋಪಿಯನ್ನು ತಮಿಳುನಾಡಿನ ಕೊಯಿಮತ್ತೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಸಾದಿಕ್ ರಾಜಾ (50) ಬಂಧಿತ ಆರೋಪಿ.
1998 ರಲ್ಲಿ ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಬ್ಲಾಸ್ಟ್ ಪ್ರಕರಣ ನಡೆದಿತ್ತು. ಇದಾದ ಬಳಿಕ ಪ್ರಮುಖ ಆರೋಪಿ ಸಾದಿಕ್ ರಾಜಾ ಕಳೆದ 27 ವರ್ಷಗಳಿಂದ ಬೇರೆ ಬೇರೆ ಕಡೆಗಳಲ್ಲಿ ತಲೆ ಮರೆಸಿಕೊಂಡಿದ್ದ.
ಕಳೆದ 12 ವರ್ಷಗಳಿಂದ ತರಕಾರಿ ಮಾರಾಟ ಮಾಡಿಕೊಂಡು ವಿಜಯಪುರದಲ್ಲಿ ಜೀವನ ನಡೆಸುತ್ತಿದ್ದ ಎಂಬ ಮಾಹಿತಿ ಆಧರಿಸಿ ಕೊಯಿಮತ್ತೂರ ಪೊಲೀಸರು ವಿಜಯಪುರಕ್ಕೆ ಆಗಮಿಸಿದ್ದರು. ಈ ಆರೋಪಿ ವಿಜಯಪುರದಲ್ಲಿ ತಲೆಮರೆಸಿಕೊಂಡಿದ್ದನ್ನು ಪತ್ತೆ ಹಚ್ಚಿ ವಿಜಯಪುರ ಪೊಲೀಸರಿಗೂ ಸುಳಿವು ನೀಡದೆ ಕೊಯಿಮತ್ತೂರು ಪೊಲೀಸರು ಆರೋಪಿಯನ್ನು ಬಂಧಿಸಿ ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ.
ಆರೋಪಿ ಸಾದಿಕ್ ರಾಜಾ ಹುಬ್ಬಳ್ಳಿ ಮೂಲದ ಮಹಿಳೆಯೊಂದಿಗೆ ವಿವಾಹವಾಗಿದ್ದ ಎಂಬ ಮಾಹಿತಿ ಇದೆ. ಆರೋಪಿ ಸಾದಿಕ್ ರಾಜಾ
ಮೂಲತಃ ಚಾಮರಾಜನಗರ ಜಿಲ್ಲೆಯ
ಗುಂಡ್ಲುಪೇಟೆ ನಿವಾಸಿಯಾಗಿದ್ದಾನೆ ಎನ್ನಲಾಗಿದೆ. ಆರೋಪಿ ಸಾದಿಕ್
ರಾಜಾ ಕೊಯಿಮತ್ತೂರು ಬ್ಲಾಸ್ಟ್ ಸೇರಿದಂತೆ ಇತರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ.
ಈ ಬಗ್ಗೆ ವಿಜಯಪುರ ಜಿಲ್ಲಾ‌ ಪೊಲೀಸರಿಗೂ ಕೊಯಿಮತ್ತೂರು ಪೊಲೀಸರು ಹೆಚ್ಚಿನ ಮಾಹಿತಿ ನೀಡಿಲ್ಲ.
ತನಿಖಾ ದೃಷ್ಟಿಯಿಂದ ವಿಜಯಪುರ ಪೊಲೀಸರಿಗೆ ಮಾಹಿತಿ ನೀಡಿಲ್ಲ
ಹೆಚ್ಚಿನ ತನಿಖೆ, ವಿಚಾರಣೆ ಕಾರಣದಿಂದ
ಕೊಯಿಮತ್ತೂರು ಪೊಲೀಸರು ಗೌಪ್ಯ ಕಾಪಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ವಿಜಯಪುರ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.

Share