ಸಪ್ತಸಾಗರ ವಾರ್ತೆ,ವಿಜಯಪುರ, ಆ. 29:
ತೀವ್ರ ಪ್ರಮಾಣದ ಮೆದುಳಿನ ರಕ್ತಸ್ರಾವದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ 47 ವರ್ಷದ ರೇಣವ್ವ ನಾಲತವಾಡ ಅವರಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ವೈದ್ಯರ ತಂಡ ಕ್ಲಿಷ್ಟಕರ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದೆ.
ರೇಣವ್ವ ಅವರು ಗ್ರೇಡ್–4 ಸಬ್ ಅರಾಕ್‌ನಾಯ್ಡ್ ಹೆಮರೇಜ್ (SAH) ಹಾಗೂ ಬಲಭಾಗದ ಮಿಡಲ್ ಸೆರೆಬ್ರಲ್ ಆರ್ಟರಿ (MCA) ಬೈಫರ್ಕೇಶನ್ ಅನ್ಯುರಿಸಮ್ನಿಂದ ಬಳಲುತ್ತಿದ್ದರು. ಅನ್ಯುರಿಸಮ್ ಛಿದ್ರಗೊಂಡ ಪರಿಣಾಮ ಮೆದುಳಿನ ಸುತ್ತಲೂ ತೀವ್ರ ರಕ್ತಸ್ರಾವವಾಗಿದ್ದು, ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು.
CT ಸ್ಕ್ಯಾನ್ ಹಾಗೂ ಆಂಜಿಯೋಗ್ರಫಿ ಪರೀಕ್ಷೆ ನಡೆಸಿದಾಗ ಬಲ MCA ಬೈಫರ್ಕೇಶನ್ ಭಾಗದಲ್ಲಿ ದ್ವಿಪ್ರಭೇದದ (Bilobed) ಅನ್ಯುರಿಸಮ್ ಪತ್ತೆಯಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರು ತುರ್ತಾಗಿ ಮೈಕ್ರೋಸರ್ಜಿಕಲ್ ಚಿಕಿತ್ಸೆಗೆ ಮುಂದಾದರು.
ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅನ್ಯುರಿಸಮ್‌ನ ಕುತ್ತಿಗೆಯನ್ನು ಯಶಸ್ವಿಯಾಗಿ ಕ್ಲಿಪ್ ಮಾಡುವುದರ ಜೊತೆಗೆ, ಮೆದುಳಿಗೆ ರಕ್ತ ಪೂರೈಸುವ ಪ್ರಮುಖ MCA ಶಾಖೆಗಳು ಮತ್ತು ಸೂಕ್ಷ್ಮ ಪರ್ಫೋರೇಟರ್ ರಕ್ತನಾಳಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದರೂ ರೇಣವ್ವ ಅವರ ಚೇತರಿಕೆ ಅತ್ಯಂತ ಉತ್ತಮವಾಗಿದ್ದು, ಶಸ್ತ್ರಚಿಕಿತ್ಸೆಯ ಬಳಿಕ ಯಾವುದೇ ಹೊಸ ನರ ದೌರ್ಬಲ್ಯ ಕಂಡುಬಂದಿಲ್ಲ. ಶಸ್ತ್ರಚಿಕಿತ್ಸೆಯ ಕೇವಲ ಏಳನೇ ದಿನವೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಆರೋಗ್ಯವಾಗಿ ಮನೆಗೆ ಮರಳಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ ಯೋಜನೆಯಡಿ ಉಚಿತ ಚಿಕಿತ್ಸೆ
ಇಡೀ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ ಯೋಜನೆಯಡಿ ನಡೆಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಹಿಳೆಯೊಬ್ಬರಿಗೆ ಇಂತಹ ಕ್ಲಿಷ್ಟಕರ ಹಾಗೂ ಅತ್ಯಾಧುನಿಕ ನರಶಸ್ತ್ರಚಿಕಿತ್ಸೆ ವಿಜಯಪುರದಲ್ಲಿಯೇ ದೊರೆತಿರುವುದು ಮಹತ್ವದ ಬೆಳವಣಿಗೆಯಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಸಮಯೋಚಿತ ರೋಗನಿರ್ಣಯ, ತಕ್ಷಣದ ಶಸ್ತ್ರಚಿಕಿತ್ಸೆ, ಪರಿಣತ ವೈದ್ಯಕೀಯ ತಂಡ ಹಾಗೂ ಸಮಗ್ರ ತೀವ್ರ ನಿಗಾ ಚಿಕಿತ್ಸೆಯ ಸಮನ್ವಯದಿಂದ ರೋಗಿಯ ಜೀವ ಉಳಿಸಲು ಸಾಧ್ಯವಾಗಿದೆ. ಈ ಯಶಸ್ಸು ಬಿಎಲ್‌ಡಿಇ ಆಸ್ಪತ್ರೆಯ ವೈದ್ಯಕೀಯ ಪರಿಣತಿ ಹಾಗೂ ತುರ್ತು ಚಿಕಿತ್ಸಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಅಪರೂಪದ ಹಾಗೂ ಕ್ಲಿಷ್ಟಕರ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿ ರೇಣವ್ವ ಅವರ ಪ್ರಾಣ ಉಳಿಸಿ, ಕೇವಲ ಒಂದು ವಾರದಲ್ಲೇ ಆರೋಗ್ಯವಾಗಿ ಮನೆಗೆ ಮರಳುವಂತೆ ಮಾಡಿದ ಡಾ. ಮಲ್ಲಪ್ಪ ಹುಗ್ಗಿ ಹಾಗೂ ಬಿಎಲ್‌ಡಿಇ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ಕೈಗಾರಿಕೆ ಸಚಿವ ಹಾಗೂ ಬಿಎಲ್‌ಡಿಇ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.


