ಸುಪ್ರೀಂ ಕೋರ್ಟ್ ನ ಅಂಗಳದಲ್ಲಿಯೂ ಕಾಂಗ್ರೆಸ್ ಮುಖಂಡ ಮುಶ್ರೀಫ್ ಗೆ ಮುಖಭಂಗ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 14:
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಲ್ಲಿ ಅಕ್ರಮ ಆರೋಪ ಮಾಡಿ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ಪ್ರಶ್ನೆ ಮಾಡಿದ್ದ ಮುಶ್ರೀಫ್ ಗೆ ಹೈಕೋರ್ಟ್ ಅರ್ಜಿ ವಜಾ ಮಾಡಿ ದಂಡ ವಿಧಿಸುವ ಮೂಲಕ ಕಾಂಗ್ರೆಸ್ ಮುಖಂಡ ಮುಶ್ರೀಫ್ ಮುಖಭಂಗಕ್ಕೆ ಒಳಗಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸುಪ್ರೀಂ ಕೋರ್ಟ್ ಅವರ ಅರ್ಜಿ ವಜಾ ಮಾಡಿದ್ದು ಎರಡನೇ ಬಾರಿ ಮುಶ್ರೀಫ್ ಅವರು ಮುಖಭಂಗ ಅನುಭವಿಸುವಂತಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಶಾಸಕ ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ಮುಶ್ರೀಫ್ ದೂರು ನೀಡಿದ್ದರು.
ಕಳೆದ 2025 ಜುಲೈ 18 ರಂದು ಕಲಬುರ್ಗಿ ಹೈಕೋರ್ಟ್ ಹಮೀದ್ ಅರ್ಜಿ ವಜಾ ಮಾಡಿ ದಂಡ ವಿಧಿಸಿತ್ತು.
ಈ ಆದೇಶ ವಿರುದ್ಧ ಮುಶ್ರೀಫ್ ಸುಪ್ರೀಂ ಮೊರೆ ಹೋಗಿದ್ದರು.
ಸುಪ್ರೀಂ ಕೋರ್ಟ್‌ ಹೈಕೋರ್ಟ್ ಆದೇಶ ಎತ್ತಿ ಹಿಡಿದು ಹಮೀದ್ ಅರ್ಜಿ ವಜಾ ಮಾಡಿದೆ. ಈಗ ಸುಪ್ರೀಂ ಅಂಗಳದಲ್ಲೂ ಹಮೀದ್ ಮುಶ್ರೀಫ್ ಗೆ ಎರಡನೆ ಬಾರಿ ಮುಖಭಂಗವಾಗಿದೆ.
ಈ ಕುರಿತು ಸತ್ಯಮೇವ ಜಯತೆ ಎಂದು ಎಕ್ಸ್ ಖಾತೆಯಲ್ಲಿ ಯತ್ನಾಳ ಪೋಸ್ಟ್ ಮಾಡಿದ್ದಾರೆ.
ನಾನು ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ರಾಜಕೀಯ ಪ್ರೇರಿತವಾಗಿ ಸುಳ್ಳು ಆರೋಪ ಮಾಡಿದವರ ಮೇಲೆ ಕಾನೂನು ರಿತ್ಯ ಕ್ರಮ ತೆಗೆದುಕೊಳ್ಳುವೆ ಎಂದಿದ್ದಾರೆ.
ಪ್ರಕರಣ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವೆ ಎಂದು ಟ್ವಿಟ್ ನಲ್ಲಿ ಯತ್ನಾಳ ಹೇಳಿದ್ದಾರೆ.

Share this