ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 6: ಕಳೆದ 27 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಮತ್ತು ಎಲ್ಲ ಹಂತದ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗಿ ಆಗಿರುವ ಡಾ. ಗಂಗಾಧರ ಸಂಬಣ್ಣಿ ಅವರ ಸೇವೆಯನ್ನು ಗುರುತಿಸಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಬಿ.ಪಾಟೀಲ ಹೇಳಿದರು.
ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿಡಿಎ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಡಾ.ಗಂಗಾಧರ ಸಂಬಣ್ಣಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜಕೀಯದಲ್ಲಿ ಏರಿಳಿತ ಕಂಡಿದ್ದರೂ ಪಕ್ಷವನ್ನು ತೊರೆಯದೇ, ನಿಷ್ಠಾವಂತ ಕಾರ್ಯಕರ್ತರಾಗಿ ಕಾಂಗ್ರೆಸ್ ಏಳಿಗೆಗೆ ಸೇವೆ ಸಲ್ಲಿಸುತ್ತಿರುವ ಡಾ.ಗಂಗಾಧರ ಸಂಬಣ್ಣಿ ಅವರಿಗೆ ಮಹಾನಗರ ಪಾಲಿಕೆ ಮೇಲ್ದರ್ಜೆಗೇರುವ ಮುಂಚೆಯೆ ನಗರಸಭೆ ಸದಸ್ಯರಾಗುವ ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ಅವರು ಖುದ್ದಾಗಿ ಮತ್ತೊಬ್ಬರಿಗೆ ಟಿಕೆಟ್ ಕೊಡಿಸಿದರು. ಬೇರೆಯವರಾಗಿದ್ದರೆ ಈ ರೀತಿ ದೊಡ್ಡ ಮನಸ್ಸು ಮಾಡುತ್ತಿರಲಿಲ್ಲ ಎಂದು ಅವರು ಹೇಳಿದರು.
ಸಚಿವ ಎಂ.ಬಿ.ಪಾಟೀಲ ಅವರ ನೇತೃತ್ವದಲ್ಲಿ ನಾನು ಮತ್ತು ಶಾಸಕ ವಿಠ್ಠಲ ಕಟಕದೊಂಡ, ಲೋಕಸಭಾ ಅಭ್ಯರ್ಥಿ ರಾಜು ಆಲಗೂರ, ಮುಖಂಡ ಹಮೀದ ಮುಶ್ರೀಫ್ ಅವರು ಡಾ.ಗಂಗಾಧರ ಸಂಬಣ್ಣಿ ಅವರನ್ನೇ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವು. ನಮ್ಮ ಮನವಿಗೆ ಸ್ಪಂದಿಸಿದ ಸಿಎಂ ಡಾ.ಗಂಗಾಧರ ಸಂಬಣ್ಣಿ ಅವರನ್ನು ವಿಡಿಎ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಚಿಕ್ಕವರಲ್ಲಿ ಚಿಕ್ಕವರಾಗಿ, ಹಿರಿಯರಲ್ಲಿ ಹಿರಿಯರಾಗಿ ಪಕ್ಷದಲ್ಲಿ ಸಹಭಾಗಿದಾರನಾಗಿ ಕಾರ್ಯ ನಿರ್ವಹಿಸುವ ಸಂಬಣ್ಣಿ ಅವರನ್ನು ಕಂಡರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ಅಭಿಪ್ರಾಯವೇ ಇದೆ. ಈಗ ಅವರನ್ನು ವಿಡಿಎ ಅಧ್ಯಕ್ಷರಾಗಿ ಮಾಡಿರುವುದು ಎಲ್ಲರಲ್ಲೂ ಸಂತಸ ತಂದಿದೆ. ಅವರು ಕಾಂಗ್ರೆಸ್ ಪಕ್ಷದ ಶಕ್ತಿಯಾಗಿ ಮುಂಬರುವ ಗ್ರಾಮ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಬಲವರ್ಧನೆಗೆ ಮತ್ತಷ್ಟು ಶ್ರಮಿಸಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ರಾಜು ಆಲಗೂರ ಮಾತನಾಡಿ, ಸೌಮ್ಯ ಸ್ವಭಾವದ ವ್ಯಕ್ತಿ ಆಗಿರುವ ಸಂಬಣ್ಣಿ ಅವರು ಪಕ್ಷಕ್ಕೆ ಸಲ್ಲಿಸಿದ ಸೇವೆಗೆ ಪ್ರತಿಫಲ ದೊರೆತಿದೆ. ಅವರು ತಮಗೆ ವಹಿಸಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸ ಇದೆ. ಎಲ್ಲರ ಸಂಪೂರ್ಣ ಸಹಕಾರ ಅವರೊಂದಿಗೆ ಇದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಗಂಗಾಧರ ಸಂಬಣ್ಣಿ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಈ ಸ್ಥಾನಕ್ಕೆ ನನ್ನನ್ನು ನೇಮಿಸಿದ್ದಾರೆ. ಅವರ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಅವರ ಮಾರ್ಗದರ್ಶನದಲ್ಲಿ ನಗರದ ಅಭಿವೄದ್ಧಿಗೆ ಶ್ರಮಿಸುತ್ತೇನೆ. ಸಚಿವರು, ಪಕ್ಷದ ವರಿಷ್ಠರು, ಜಿಲ್ಲಾ ಮುಖಂಡರು ನನ್ನ ಮೇಲೆ ಇಟ್ಟ ಭರವಸೆಯನ್ನು ಉಳಿಸಿಕೊಳ್ಳುತ್ತೇನೆ. ನನಗೆ ನೂತನ ಜವಾಬ್ದಾರಿ ವಹಿಸಲು ಕಾರಣರಾದ ಮತ್ತು ಬೆಂಬಲಿಸಿದ ಎಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಹಮೀದ ಮುಶ್ರಿಫ್, ವಿಡಿಎ ಮಾಜಿ ಅಧ್ಯಕ್ಷ ಕನ್ನಾನ ಮುಶ್ರಿಫ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ ಬಕ್ಷಿ, ಡಾ.ಪ್ರಭುಗೌಡ ಪಾಟೀಲ, ಮೊಹಮ್ಮದರಫಿಕ ಟಪಾಲ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಡಾ. ಸಂಬಣ್ಣಿಗೆ ವಿಡಿಎ ಅಧ್ಯಕ್ಷ ಸ್ಥಾನಕ್ಕೆ ನೇಮಕ: ಎಂಎಲ್ ಸಿ ಸುನೀಲಗೌಡ


