ಸಪ್ತಸಾಗರ ವಾರ್ತೆ,ವಿಜಯಪುರ, ಮೇ 16:
ಆಹಾರ ಪದ್ಧತಿಯಲ್ಲಿ ದ್ವಿದಳ ಧಾನ್ಯಗಳಿಗೆ ಅಗ್ರಸ್ಥಾನವಿದೆ. ಅಕ್ಕಡಿ ಕಾಳಿಲ್ಲದ ಊಟಿಲ್ಲ, ಅಷ್ಟರ ಮಟ್ಟಿಗೆ ತೊಗರಿಯೂ ನಮ್ಮ ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅವು ನಮ್ಮ ಜೀವನಕ್ಕೆ ಬೇಕಾದ ಪೋಷಕಾಂಶ ನೀಡುತ್ತವೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪಿ.ಎಲ್ ಪಾಟೀಲ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ವಿಜಯಪುರದ ಕೃಷಿ ತಂತ್ರಜ್ಞರ ಸಂಸ್ಥೆ, ಮತ್ತು ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತೊಗರಿ ಬೆಳೆಯಲ್ಲಿ ಉತ್ಪಾದನಾ ತಾಂತ್ರಿಕತೆಗಳ ಕಾರ್ಯಾಗಾರ-೨೦೨೬ ಉದ್ದೇಶಿಸಿ ಅವರು ಮಾತನಾಡಿದರು.
ಬೇಳೆ ಕಾಳುಗಳಲ್ಲಿ ಸಾಕಷ್ಟು ಪೌಷ್ಟಿಕಾಂಶಗಳಿವೆ. ಬಹಳಷ್ಟು ವಿಟ್ಯಾಮಿನ್ ಇವೆ. ಊಟದಲ್ಲಿ ಬೇಳೆ ಕಾಳುಗಳ ಅಗತ್ಯವಿದೆ. ಆರೋಗ್ಯವಂತರಾಗಲು ಅಕಡಿ ಕಾಳು ತಿನ್ನಬೇಕು. ರಕ್ತ ಚಲನವಲನಕ್ಕೆ, ಹೃದಯ ಸಂಬಂಧಿ ಕಾಯಿಲೆಗಳ ನಿಯಂತ್ರಣಕ್ಕೂ ಬೇಳೆ ಕಾಳು ಬೇಕು ಎಂದರು.
ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಆರೋಗ್ಯಯುತ ಜೀವನ ರೂಢಸಿಕೊಳ್ಳಬೇಕು. ಬೇಳೆ ಕಾಳುಗಳಿಂದ ಅಜೀರ್ಣತೆ ಆಗುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು.
ಬೇಳೆ ಕಾಳುಗಳು ಕೃಷಿಗೆ ಮುಖ್ಯವಾಗಿ ಪರಿಸರ ಸ್ನೇಹಿ ಬೆಳೆಗಳಾಗಿವೆ. ಹಾಗಾಗಿ ಅಕ್ಕಡಿಕಾಳುಗಳನ್ನು ಯಥೇಚ್ಛವಾಗಿ ಬೆಳೆಯಬೇಕು. ರಾಜ್ಯದಲ್ಲಿ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ತೊಗರಿಯನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಹಾಗಾಗಿ ತೊಗರಿ ಬಿತ್ತನೆಯಲ್ಲಿ ವಿಶೇಷ ತಾಂತ್ರಿಕತೆ ಅಳವಡಿಸಿಕೊಂಡು ಬೇಳೆ ಹಾಗೂ ಎಣ್ಣೆಕಾಳು ಬೆಳೆದು ಸ್ವಾವಲಂಬಿ ಜೀವನ ಸಾಧಿಸಬಹುದಾಗಿದೆ ಎಂದರು.
ತೊಗರಿ ಬೆಳೆಯಲ್ಲಿ ಅಂತರ ಬೆಳೆಯನ್ನು ಬೆಳೆಯಬೇಕು. ಒಟ್ಟಾರೆ ಬೇಳೆ ಕಾಳುಗಳ ಉತ್ಪಾದನೆ ಜಾಸ್ತಿಯಾಗಬೇಕು ಎಂದರು.
ನೀರಿನ ಮಹತ್ವ ತಿಳಿದು ಮಳೆ ನೀರನ್ನು ಹಿಡಿದಿಟ್ಟುಕೊಂಡು ನೀರಿನ ಸದ್ಭಳಕೆ ಮಾಡಿಕೊಳ್ಳಬೇಕು. ಮುಂಗಾರು ಅನಿಶ್ಚಿತತೆ ಹಿನ್ನೆಲೆಯ ನೀರಿನ ಸಂರಕ್ಷಣೆ ಮಾಡಿದರೆ ಮಣ್ಣಿನ ಸಂರಕ್ಷಣೆ ಮಾಡಿದಂತಾಗುವುದು.
ಮಣ್ಣು ಮತ್ತು ನೀರಿನ ಸಂರಕ್ಷಣೆ ಬಹಳ ಮುಖ್ಯವಾಗಿದೆ. ಹಾಗಾಗಿ ಭೂಮಿಗೆ ಸಾವಯವ ಗೊಬ್ಬರ ಬಳಸಿ ಭೂಮಿಯ ಫಲವತ್ತತೆ ಕಾಯ್ದು ಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಉಪ ಕಸುಬನ್ನು ಒಳಗೊಳ್ಳಬೇಕು. ದನಕರುಗಳು ಮನೆಯಲ್ಲಿ ಇರಬೇಕು. ನಮ್ಮ ಭೂಮಿಯ ತಳ ಕಸುವಿಗಾಗಿ ಸಾಕಷ್ಟು ಸಾವಯವ ಗೊಬ್ಬರ ಬಳಕೆ ಮಾಡಬೇಕು ಎಂದು ಹೇಳಿದರು.
ವಿಜಯಪುರ ರೈತರು ಶ್ರಮ ಜೀವಿಗಳು. ಮಡ್ಡಿ ಜಮೀನಿನಲ್ಲಿ ಬಂಗಾರ ಬೆಳೆಯುವರು ಎಂದು ಜಿಲ್ಲೆಯ ರೈತರನ್ನು ಇದೇ ವೇಳೆ ಕೊಂಡಾಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ ಮಾತನಾಡಿ,
ಜಿಲ್ಲೆಯಲ್ಲಿ ಅತಿ ಹೆಚ್ಚು ತೊಗರಿ ಬೆಳೆ ಬೆಳೆಯಲಾಗುತ್ತಿದೆ. ಮೊದಲ ಐದು ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಶೇ. 60ರಷ್ಟು ರೈತರು ತೊಗರಿ ಬೆಳೆಯುತ್ತಿದ್ದಾರೆ. ವಾತಾವರಣಕ್ಕೆ ಹೊಂದಿಕೊಂಡು ಎಕರೆಗೆ ಒಂದು ಕ್ವಿಂಟಾಲ್ ಹೆಚ್ಚುವರಿಯಾಗಿ ಇಳುವರಿ ಬರುವಂತೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಬೀಜೋಪಚಾರ ಮಾಡಲೇಬೇಕು. ಬಿತ್ತನೆ ಪೂರ್ವ ಇದು ಕಡ್ಡಾಯ. ಇದು ಮನನ ಮಾಡಬೇಕು. ಅದೇ ಜಮೀನಿನಲ್ಲಿ ಬೆಳೆಯುವುದರಿಂದ ರೋಗಬಾಧೆ ತಡೆಗಟ್ಟಲು ಇದು ಕಡ್ಡಾಯವಾಗಿದೆ ಎಂದ ಅವರು, ತೊಗರಿ ಇಳುವರಿ ಹೆಚ್ಚಿಸುವ ಕಾರ್ಯತಂತ್ರಗಳ ಕುರಿತು ಅರಿತುಕೊಳ್ಳಬೇಕು ಎಂದರು.
ಎರಡನೇ ಸೂತ್ರ ಮಣ್ಣಿನ ಫಲವತ್ತತೆ ಆಧಾರದ ಮೇಲೆ ಅಗಲ ಸಾಲು ಬಿತ್ತನೆಗೆ ಪ್ರೋತ್ಸಾಹ ನೀಡುವುದು. ಭೂಮಿಯ ಫಲವತ್ತತೆ ರೈತ ತಿಳಿದುಕೊಳ್ಳಬೇಕು.
ತೊಗರಿ ಬೆಳೆಯಲ್ಲಿ ಸೂರ್ಯಕಾಂತಿ, ಸಜ್ಜೆ ಮೆಕ್ಕೆಜೋಳ, ಹೆಸರು, ಶೇಂಗಾ ಹಾಗೂ ಉದ್ದು ಬೆಳೆಗಳನ್ನು ಅಂತರ ಬೆಳೆಯನ್ನಾಗಿ ಬೆಳೆಯಬೇಕು. ಪ್ರಸಕ್ತ ವರ್ಷದ ಮುಂಗಾರಿನಲ್ಲಿ 5000 ಹೆ.ಪ್ರದೇಶದಲ್ಲಿ ಅಂತರ ಬೆಳೆಯನ್ನಾಗಿ ಬೆಳೆಯಲು ಯೋಜಿಸಲಾಗಿದೆ ಎಂದರು.
ಕುಡಿ ಚಿವುಟುವ ಕಾರ್ಯಕ್ಕೆ ಉತ್ತೇಜನ ನೀಡುವ ದೂರದೃಷ್ಟಿಯಿಂದ ಬಿತ್ತಿದ 45-50 ದಿನಗಳಲ್ಲಿ ಮಾಡಬೇಕು. ಹಾಗಾದಾಗ ಹೆಚ್ಚಿನ ಕವಲು ಒಡೆಯಲು ಸಹಕಾರಿಯಾಗುವುತ್ತದೆ. ಇದರಿಂದ ಹೆಚ್ಚಿನ ಹೂವು ಹಾಗೂ ಕಾಯಿ ಬಿಡಲು ಅನುಕೂಲವಾಗುತ್ತದೆ ಎಂದರು.
ತೊಗರಿ ಬೆಳೆಯ ಕ್ಷೇತ್ರ ಹೆಚ್ಚಿಸುವ ಕಾರ್ಯತಂತ್ರಗಳಾದ ತೊಗರಿ ಬೆಳೆಯಲ್ಲಿ ತೊಗರಿ ಬೆಳೆಯನ್ನೇ ಕಾವಲು ಬೆಳೆಯನ್ನಾಗಿ ಬೆಳೆದರೆ ಕೀಟ ಬಾಧೆಯಿಂದ ಮುಕ್ತಿ ಹೊಂದಬಹುದು ಎಂದರು.
ಸಾಧ್ಯವಿದ್ದಲ್ಲಿ ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಪಲ್ಸ ಮ್ಯಾಜಿಕ್ ಹಾಗೂ ಪಲ್ಸ್ ಬೂಸ್ಟರ್ ಇತ್ಯಾದಿಗಳ ಬಳಕೆ ಮಾಡುವುದರಿಂದ ಹೆಚ್ಷಿನ ಹೂ ಹಾಗೂ ಕಾಯಿಕಟ್ಟಲು ಅನುಕೂಲವಾಗುತ್ತದೆ ಎಂದ ಅವರು, ಜೊತೆಗೆ ಅವಶ್ಯಕತೆಯನುಸಾರ ಔಷಧಿ ಸಿಂಪರಣೆ ಮಾಡಬೇಕು ಎಂದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಶೇ ನೂರರಷ್ಟು ತೊಗರಿಯನ್ನು ಖರೀದಿ ಕೇಂದ್ರಗಳ ಮೂಲಕ ಖರೀದಿಸಲಾಗುತ್ತಿದೆ. 8,450 ರೂ. ಪ್ರತಿ ಕ್ವಿಂಟಲ್ ಸರ್ಕಾರ ಖರೀದಿಸಲಾಗುತ್ತಿದೆ. ರೈತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಅತ್ಯಧಿಕ ತೊಗರಿ ಇಳುವರಿಗೆ ಪ್ರತಿಯೊಬ್ಬ ರೈತರು ಮಾಗಿ ಊಳುಮೆ ಮಾಡಿಯೇ ಜಮೀನಿಗೆ ತೊಗರಿ ಬಿತ್ತನೆ ಮಾಡಬೇಕು. ಮಾಗಿ ಊಳುಮೆ ಮಾಡುವುದರಿಂದ ಭೂಮಿಯಲ್ಲಿರುವ ಕೀಟಗಳು ಹೊರಗೆ ಬರುತ್ತವೆ. ಅವುಗಳನ್ನು ಪಕ್ಷಿಗಳು ತಿನ್ನುತ್ತವೆ. ಇದರಿಂದ ಬೆಳೆದ ಬೆಲೆಗೆ ಕೀಟ ಬಾಧೆಯಾಗುವುದಿಲ್ಲ. ಹಾಗಾಗಿ ರೈತರು ಮಾಗಿ ಊಳುಮೆ ಕೈಗೊಳ್ಳಬೇಕು ಎಂದರು.
ನಾಗಠಾಣ ಹೋಬಳಿಯ ಗೂಗದಡ್ಡಿಯ ಪ್ರಗತಿಪರ ರೈತ ಸುರೇಶ ಮಾಗಿ ಮಾತನಾಡಿ, ಪ್ರತಿಯೊಬ್ಬ ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು. ಬಳಿಕ ರೈತರಿಂದ ಕೇಳಿಬಂದ ಪ್ರಶ್ನೆಗಳಿಗೆ ಸುರೇಶ ಅವರು ಉತ್ತರಿಸಿದರು.
ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಆರ್.ಎಂ. ಹೂಗಾರ ಮಾತನಾಡಿ, ತೊಗರಿ ಬೆಳೆಯಲ್ಲಿ ತಾಂತ್ರಿಕತೆ ಕುರಿತು ವಿವರಿಸಿದರು. ಹನಿ ನೀರಾವರಿ ಮಾಡಿದರೆ ಬಹಳ ಅನುಕೂಲವಾಗುತ್ತದೆ ಎಂದರು.
ಇದೇ ವೇಳೆ ತಾಂತ್ರಿಕ ಹಸ್ತ ಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು.
ರೈತರ ನಾಡಗೀತೆಯೊಂದಿಗೆ ಕಾರ್ಯಕ್ರಮವಾಯಿತು. ಕಾರ್ಯಾಗಾರದಲ್ಲಿ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ವಿಜ್ಞಾನಿಗಳು, ವಿದ್ಯಾರ್ಥಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.
ಆರೋಗ್ಯಕ್ಕೆ ಅಕ್ಕಡಿ ಕಾಳು ಸೇವನೆ ಅಗತ್ಯ: ತೊಗರಿಯಲ್ಲಿ ಉತ್ಪಾದನಾ ತಾಂತ್ರಿಕತೆಗಳ ಕಾರ್ಯಾಗಾರ


