ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 16:
ವಿಜಯಪುರ ಜಿಲ್ಲೆಯಲ್ಲಿನ ಕಾರ್ಮಿಕ ಅಧಿಕಾರಿ ಕಛೇರಿಯಲ್ಲಿ ವ್ಯಾಪಕವಾಗಿ ಅವ್ಯವಹಾರ ಮತ್ತು ಭೃಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಜಿಲ್ಲೆಯ ಕಾರ್ಮಿಕ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿ ಶೋಧನಾ ಕಾರ್ಯ ಕೈಗೊಂಡಿದ್ದಾರೆ.
ಕಾರ್ಮಿಕ ಇಲಾಖೆಯಲ್ಲಿ ಅವ್ಯವಹಾರ ಹಾಗೂ ವ್ಯಾಪಕ ಭ್ರಷ್ಟಾಚಾರ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಕಾರಣ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾರ್ಮಿಕ ಇಲಾಖೆಯನ್ನು ಶೋಧನೆ ಮಾಡಲು ಶೋಧನಾ ವಾರಂಟ್ ಹೊರಡಿಸಿದ್ದು, ಹೀಗಾಗಿ ವಿಜಯಪುರ ಜಿಲ್ಲೆಯ ಕಾರ್ಮಿಕ ಇಲಾಖೆಯ ಕಛೇರಿಯನ್ನು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಮತ್ತು 3 ಜನ ಪೊಲೀಸ್ ನಿರೀಕ್ಷಕರುಗಳ ತಂಡ ಕಾರ್ಮಿಕ ಇಲಾಖೆ ಕಛೇರಿ ಮೇಲೆ ದಾಳಿ ಮಾಡಿ ಕಳೆದ 2 ದಿನಗಳಿಂದ ಶೋಧನೆ ಕೈಗೊಂಡಿದ್ದಾರೆ.
ಶೋಧನೆಯ ವೇಳೆ ಕಾರ್ಮಿಕರುಗಳಿಗೆ ನೀಡಬೇಕಾದ 44,000 ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸದೆ ಕಛೇರಿಯಲ್ಲಿಟ್ಟುಕೊಂಡಿರುತ್ತಾರೆ. ಕಾರ್ಮಿಕರ 1233 ಅರ್ಜಿಗಳನ್ನು ಬಾಕಿ ಇರಿಸಿಕೊಂಡಿದ್ದು, ಅಲ್ಲದೆ ಸರಕಾರದಿಂದ ಅಸಂಘಟಿತ ಕಾರ್ಮಿಕರಿಗೆ ಅಪಘಾತದಿಂದ ಮೃತಪಟ್ಟ ಅರ್ಜಿಗಳು, ಹೆರಿಗೆ ಸೌಲಭ್ಯದ ಅರ್ಜಿಗಳು, ಬಾಲ ಕಾರ್ಮಿಕರ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದಿರುವ ಕುರಿತು ಅವ್ಯವಹಾರಗಳು ಪತ್ತೆಯಾಗಿರುತ್ತವೆ. ಅಲ್ಲದೆ ಕಾರ್ಮಿಕರಿಗೆ ನೀಡಬೇಕಾಗಿದ್ದ ರೂ.1.10 ಕೋಟಿ ಹಣವನ್ನು ಕಳೆದ ಹಲವು ವರ್ಷಗಳಿಂದ ಇಲಾಖೆಯಲ್ಲಿ ಉಳಿಸಿಕೊಂಡಿರುವುದು ಕಂಡು ಬಂದಿರುತ್ತದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ.ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಮಲ್ಲಿಕಾರ್ಜುನ ಎಸ್. ತುಳಸಿಗೇರಿ, ಲೋಕಾಯುಕ್ತ ಪೊಲೀಸ್ ನಿರೀಕ್ಷಕರುಗಳಾದ ಆನಂದ ಟಕ್ಕನ್ನವರ್, ಆನಂದ ದೋಣಿ, ನಿಂಗಪ್ಪ ಪೂಜೇರಿ ಹಾಗೂ ಕಛೇರಿ ಸಿಬ್ಬಂದಿಗಳು ವಿಜಯಪುರ ಕಾರ್ಮಿಕ ಅಧಿಕಾರಿ ಕಛೇರಿಯ ಶೋಧನಾ ಕಾರ್ಯದಲ್ಲಿ ತೊಡಗಿದ್ದು, ಮೇಲ್ಕಂಡ ಯೋಜನೆಗಳಿಗೆ ಸಂಬಂಧಿಸಿದ ಮತ್ತು ಇತರೆ ಸೌಲಭ್ಯಗಳ ಕುರಿತು ದಾಖಲಾತಿಗಳ ಪರಿಶೀಲನೆ ಮತ್ತು ಬಾಕಿ ಇರುವ ಕೆಲಸಗಳ ಬಗ್ಗೆ ಶೋಧನೆ ಕಾರ್ಯ ಇನ್ನೂ ಮುಂದುವರೆದಿದೆ.
ಭೃಷ್ಟಾಚಾರ: ಕಾರ್ಮಿಕ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ


