ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 28 :
ಬಬಲೇಶ್ವರದ ಶಾರದಾ ಸ್ಕೂಲ್ ವಿಶಾಲ ಮೈದಾನದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಡಿ.೨೯ ರಂದು ನಡೆಯಲಿದ್ದು, ಹಲವಾರು ಹರ-ಗುರು-ಚರ ಮೂರ್ತಿಗಳ ಪಾವನ ಸಾನ್ನಿಧ್ಯದಲ್ಲಿ ಈ ಸಮಾವೇಶ ನಡೆಯಲಿದ್ದು. ಸಮಾವೇಶಕ್ಕೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. 60*100 ಅಳತೆಯ ಬೃಹತ್ ವೇದಿಕೆಯನ್ನು ರೂಪಿಸಲಾಗಿದ್ದು, 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ 500 ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸುವ ನಿರೀಕ್ಷೆ ಇದ್ದು, ಹಿಂದೂ ಧರ್ಮ ಚಿಂತಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಅನೇಕರು ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕನ್ಹೇರಿ ಶ್ರೀಗಳಿಗೂ ಸಹ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಸಮಾರಂಭಕ್ಕೆ ವಿಜಯಪುರದಿಂದಲೂ 2 ಸಾವಿರಕ್ಕೂ ಹೆಚ್ಚು ಬೈಕ್ ರ್ಯಾಲಿ ಮೂಲಕ ಯುವಕರು ಪ್ರಯಾಣ ಬೆಳೆಸಲಿದ್ದು, ಈ ಬೈಕ್ ರ್ಯಾಲಿ ಸಾರವಾಡಕ್ಕೆ ತಲುಪಲಿದೆ. ಅಲ್ಲಿ ಸಾವಿರಾರು ಯುವಕರು ಬೈಕ್ ರ್ಯಾಲಿ ಮೂಲಕ ಸಾಗಲಿದ್ದಾರೆ. ಶಾಂತವೀರ ವೃತ್ತದಿಂದ 4 ಸಾವಿರ ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಅಣ್ಣ ಬಸವೇಶ್ವರ ವೃತ್ತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಮಾರ್ಗದಲ್ಲಿ ಈ ಕುಂಭ ಮೆರವಣಿಗೆ ಸಾಗಲಿದ್ದು, ಸಮಾವೇಶ ನಡೆಯಲಿರುವ ಸ್ಥಳಕ್ಕೆ ತಲುಪಲಿದೆ.
ಹಿಂದೂ ಧರ್ಮ ಸಂಘಟನೆಯ ಏಕೈಕ ಉದ್ದೇಶದೊಂದಿಗೆ ಈ ಸಮಾವೇಶ ಆಯೋಜಿಸಲಾಗುತ್ತಿದೆ. ಅನೇಕ ಪೂರ್ವಭಾವಿ ಸಭೆಗಳನ್ನು ಬೆಳಗಾವಿ, ವಿಜಯಪುರ, ಬಬಲೇಶ್ವರದಲ್ಲಿ ನಡೆಸಲಾಗಿದೆ. ಸಾವಿರಾರು ಜನರು ಈ ಸಮಾವೇಶದಲ್ಲಿ ಭಾಗವಹಿಸುತ್ತಾರೆ, 500 ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಸಮಾವೇಶದ ಸಂಚಾಲಕರಾದ ರವಿಕಾಂತ ಬಗಲಿ ವಿವರಣೆ ನೀಡಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪ್ರಮುಖರಾದ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ರಾಜು ಬಿರಾದಾರ, ಪ್ರಭು ಹಿರೇಮಠ, ಮಲ್ಲು ಕನ್ನೂರ, ಈರಣ್ಣ ಶಿರಮಗೊಂಡ, ಉಮೇಶ ಕೋಳಕೂರ, ಕಲ್ಲಪ್ಪ ಕೊಡಬಾಗಿ ವಿಜಯ ಜೋಶಿ, ಸಿದ್ದು ಮಲ್ಲಿಕಾರ್ಜುನಮಠ, ವಿಕಾಸ ಪದಕಿ, ಬಾಲರಾಜ ರೆಡ್ಡಿ, ಸಂಪತ ಕಾಳೆ ಮತ್ತಿತರರು ಇದ್ದರು.
ಬಬಲೇಶ್ವರದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಕ್ಷಣಗಣನೆ


