ಅಭಿವೃದ್ಧಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವುದು ಪತ್ರಕರ್ತರ ಆದ್ಯ ಕರ್ತವ್ಯ-ಅಶೋಕ ಯಡಳ್ಳಿ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 11:
ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ ಮತ್ತಿತರ ಅಭಿವೃದ್ಧಿ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಪತ್ರಕರ್ತರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಪತ್ರಕರ್ತರು ಮಕ್ಕಳು ಹಾಗೂ ಸಮಾಜದ ಹಿತದೃಷ್ಟಿಯಿಂದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಹಾಗೂ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಹೈದರಾಬಾದ್‌ನ ಯುನಿಸೆಫ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಮಕ್ಕಳ ವಿಷಯಗಳ ಕುರಿತು ಕರ್ನಾಟಕ ರಾಜ್ಯದ ಪತ್ರಕರ್ತರಿಗೆ ಪರಿಚಯ” ವಿಷಯದಡಿ ಕಿಶೋಧರ ಆರೋಗ್ಯ ಮತ್ತು ಪೌಷ್ಟಿಕತೆ, ಸಾಂಕ್ರಾಮಿಕವಲ್ಲದ ರೋಗಗಳು, ಆರೋಗ್ಯಕರ ಆಹಾರ ಪದ್ಧತಿ ಹಾಗೂ ರಸ್ತೆ ಸುರಕ್ಷತೆ ಕುರಿತ ಎರಡನೇ ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಪತ್ರಕರ್ತರು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತೇವೆ. ಯುನಿಸೆಫ್ ಮಕ್ಕಳಿಗಾಗಿ ಜಗತ್ತಿನಾದ್ಯಂತ ಸಕ್ರಿಯ ಕೆಲಸ ಮಾಡುತ್ತಿದೆ. ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ ಇನ್ನಿತರ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಒಬ್ಬ ಪತ್ರಕರ್ತನಿಗೆ ಈ ಕಾರ್ಯಾಗಾರ ನೀಡುವುದರಿಂದ ಒಂದು ಲಕ್ಷ ಜನರಿಗೆ ಮಾಹಿತಿ ತಲುಪಿಸಿದಂತೆ ಆಗಲಿದೆ. ಒತ್ತಡದ ನಡುವೆಯೂ ನೀವೆಲ್ಲ ಕಾರ್ಯಾಗಾರಕ್ಕೆ ಬಂದಿದ್ದು ಖುಷಿ ತಂದಿದೆ. ಮಾಧ್ಯಮ ಬದಲಾಗಿದೆ. ಆದರೂ ಬದಲಾವಣೆ ಮಾಧ್ಯಮದಿಂದಲೇ ಸಾಧ್ಯ. ಇಂದು ರೀಲ್ಸ್ ಯುಗ ಬಂದಿದೆ. ಜನರಿಗೆ ಕೇಳಿಸಿಕೊಳ್ಳುವ ವ್ಯವಧಾನ ಇಲ್ಲ. ತಪ್ಪು ಮಾಹಿತಿ ನೀಡಿದರೂ ನಾವು ಸರಿಯಾದ ವಿಷಯ ಬರೆಯಬೇಕು ಎಂದು ಕಿವಿಮಾತು ಹೇಳಿದರು.
ಎರಡು ದಿನದ ಕಾರ್ಯಾಗಾರ ಬಗ್ಗೆ ಪತ್ರಕರ್ತರು ಅನುಭವ ಹಂಚಿಕೊಂಡರು.
ಯುನಿಸೆಫ್ ಪ್ರತಿನಿಧಿ ಪ್ರಶೂನ್ ಸೇನ್, ಮೈಸೂರು ವಿವಿಯ ಸ್ವಪ್ನ ಎಂ.ಎಸ್., ಡಾ.ರಾಕೇಶ್, ಮಂಜುನಾಥ ಇತರರಿದ್ದರು.

Share this