ಎಂ.ಬಿ. ಪಾಟೀಲರು ಶ್ರೇಯಸ್ಸು ಪಡೆದುಕೊಳ್ಳುವುದು ಸರಿಯಲ್ಲ
ಸಪ್ತಸಾಗರ ವಾರ್ತೆ,ವಿಜಯಪುರ, ಆ.2: ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣದ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭಗೀರಥ ಪ್ರಯತ್ನವಿದ್ದು, ಸಚಿವ ಡಾ. ಎಂ.ಬಿ. ಪಾಟೀಲರ ಪಾತ್ರ ಅಷ್ಟಾಗಿ ಇಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆರೋಪಿಸಿದರು.
ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, 723 ಎಕರೆ ಭೂಸ್ವಾಧೀನ ಸೇರಿದಂತೆ ಯೋಜನೆಗೆ ಅಗತ್ಯವಾದ ಪ್ರಮುಖ ಕಾರ್ಯಗಳನ್ನು ಬಿಜೆಪಿ ಸರ್ಕಾರ ಕೈಗೊಂಡಿತ್ತು ಎಂದು ಹೇಳಿದರು.
ಕಾಂಗ್ರೆಸ್ ಎರಡು ಬಾರಿ ಅಧಿಕಾರದಲ್ಲಿದ್ದರೂ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ವಿಫಲವಾಯಿತು. ನಂತರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ವಿಶೇಷ ಅನುದಾನ ಹಾಗೂ ಮುತುವರ್ಜಿ ವಹಿಸಿದ ಪರಿಣಾಮ ಕಾಮಗಾರಿ ಅಂತಿಮ ಹಂತ ತಲುಪಿತು. ಪರಿಸರ ಅನುಮತಿ ದೊರಕದ ಕಾರಣ ಮಾತ್ರ ವಿಮಾನ ನಿಲ್ದಾಣ ಆರಂಭವಾಗಿರಲಿಲ್ಲ. ಈಗ ಅಂತಿಮ ಹಂತದ ಕಾರ್ಯಗಳನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುವುದು ಸೂಕ್ತವಲ್ಲ ಎಂದು ಟೀಕಿಸಿದರು.
ವಿಮಾನ ನಿಲ್ದಾಣದ ಶ್ರೇಯಸ್ಸು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಂಸದರಾದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ ಸೇರಿದಂತೆ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು ಎಂದರು.
ಅಗ್ನಿಶಾಮಕ ವಾಹನ ಹಾಗೂ ಪೂರಕ ಉಪಕರಣಗಳ ಖರೀದಿ ಮಾತ್ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವುದನ್ನು ಒಪ್ಪಿಕೊಳ್ಳಬಹುದು ಎಂದು ಹೇಳಿದರು.
ನೀರಾವರಿ ಯೋಜನೆಗಳ ವಿಷಯದಲ್ಲಿಯೂ ಸಚಿವ ಡಾ. ಎಂ.ಬಿ. ಪಾಟೀಲರು ಅನಗತ್ಯವಾಗಿ ಶ್ರೇಯಸ್ಸು ಪಡೆದುಕೊಳ್ಳುತ್ತಿದ್ದಾರೆ. ಕೆರೆ ತುಂಬುವ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವೇ ಒಂದು ಹಂತದಲ್ಲಿ ಅವೈಜ್ಞಾನಿಕ ಎಂದು ಹೇಳಿತ್ತು. ಬಳಿಕ ಬಿಜೆಪಿ ಸರ್ಕಾರ ಅದನ್ನು ಅನುಷ್ಠಾನಗೊಳಿಸಿತು. ಆದರೂ ಅದರ ಶ್ರೇಯಸ್ಸನ್ನೂ ಕಾಂಗ್ರೆಸ್ ಪಡೆದುಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಂಜಯ ಪಾಟೀಲ ಕನಮಡಿ, ಈರಣ್ಣ ರಾವೂರ, ಭೀಮಾಶಂಕರ ಹದನೂರ, ಡಿ.ಜಿ. ಬಿರಾದಾರ, ವಿಜಯ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


