ಸಪ್ತಸಾಗರ ವಾರ್ತೆ, ವಿಜಯಪುರ, ಜು. 11:
ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಪಠ್ಯೇತರ ಚಟುವಟಿಕೆ ಸಹ ಮುಖ್ಯ. ಸಾಂಸ್ಕೃತಿಕ ಚಟುವಟಿಕೆ ಅವರ ಜೀವನದ ಅವಿಭಾಜ್ಯ ಅಂಗವಾಗಬೇಕು. ಅವು ಇಡೀ ಜೀವನದ ಯಶಸ್ಸು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಭದ್ರ ಬುನಾದಿಯಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಶನಿವಾರ ನಗರದ ಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ 2026-27ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ, ಮಾನಸಿಕ ಒತ್ತಡ ನಿವಾರಣೆ, ದೈಹಿಕ ಸಾಮರ್ಥ್ಯ, ನಾಯಕತ್ವ ಗುಣಗಳ ಅಭಿವೃದ್ಧಿಗೆ ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯವಾಗಿದ್ದು, ತಮ್ಮ ಶೈಕ್ಷಣಿಕ ದಿಸೆಯಲ್ಲಿ ಅವನ್ನು ರೂಢಿಸಿಕೊಂಡಾಗ ತಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಓದುವ, ಬರೆಯುವ, ಜ್ಞಾನದ ಜತೆಗೆ ಬದುಕಿಗೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು. ಇಂದಿನ ಯುವಪೀಳಿಗೆ ಕುಟುಂಬ, ಸಮಾಜ, ದೇಶದ ಆಸ್ತಿಯಾಗುವಂತೆ ಪಾಲಕರು, ಶಿಕ್ಷಕರು ಶ್ರಮಿಸಬೇಕು. ಅವರಲ್ಲಿ ನಾನು ವಿಶ್ವಮಾನವನೆಂಬ ಪ್ರಜ್ಞೆ ಬೆಳೆಸಬೇಕು ಎಂದು ಹೇಳಿದರು.
ಉಪನ್ಯಾಸಕಿ ಡಾ.ಜಿ ಎಸ್ ಹಳ್ಳೂರ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಜೀವನ ಅದನ್ನು ಸದುಪಯೋಗ ಮಾಡಿಕೊಂಡು ಒಳ್ಳೆಯ ಅಂಕ ಪಡೆದು ಪಾಲಕರಿಗೆ ಹಾಗೂ ಕಾಲೇಜಿಗೆ ಒಳ್ಳೆಯ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.
ಪ್ರಾಚಾರ್ಯ ಎಸ್ ಆರ್ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರು-ಹಿರಿಯರನ್ನು ಗೌರವಿಸುವ, ಪರಸ್ಪರ ಪ್ರೀತಿ, ಸ್ನೇಹ, ಸಹಬಾಳ್ವೆಯಿಂದ ಜೀವನ ಸಾಗಿಸುವ, ಸಕಾರಾತ್ಮಕ ಚಿಂತನೆ, ಸಮಾಜ ಸೇವೆಯಂತಹ ಜೀವನದ ಮೌಲ್ಯಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾನಿಕೇತನ ಕಾಲೇಜಿನ ಪ್ರಾಚಾರ್ಯ ಕೆ ಎಸ್ ಆಲಮೇಲ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಎಸ್ ಎಸ್ ಬಸರಕೋಡ, ಉಪನ್ಯಾಸಕರಾದ ಬಿ ಎಸ್ ಮೇತ್ರಿ, ಬಿ ಬಿ ಪಾಟೀಲ, ಎಸ್ ಎಸ್ ಪಾಟೀಲ, ಬಿ ಎಸ್ ತೇರದಾಳ, ಕೆ ವಿ ಅಂಕಲಕೋಟಿ, ಎಲ್ ಬಿ ಇಂಗಳೆ, ಎಂ ಎಸ್ ಪಾಟೀಲ, ಎಸ್.ಜಿ. ಪಾಟೀಲ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಸುನೀಲ ರಾಠೋಡ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಿದ್ದು ಯಾಳಗಿ ನಿರೂಪಿಸಿದರು. ಸ್ವಪ್ನ ಚಲವಾದಿ ವಂದಿಸಿದರು.
ಸಾಂಸ್ಕೃತಿಕ ಚಟುವಟಿಕೆ ವ್ಯಕ್ತಿತ್ವ ವಿಕಸನಕ್ಕೆ ಬುನಾದಿ-ಸಂತೋಷ ಬಂಡೆ


